ಕ್ರೀಡೆ

ಇಂಥಾ ಪ್ರಶ್ನೆ ಏಕೆ ಕೇಳ್ತೀರಿ? ಚಾಂಪಿಯನ್ಸ್ ಟ್ರೋಫಿಯಿಂದ ಪಾಕ್ ಹೊರಬಿದ್ದ ​ಬೆನ್ನಲ್ಲೇ ಅಕ್ರಂ ಗರಂ | Champions Trophy

Champions Trophy: ಫೆ.23ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್​ ಕದನದಲ್ಲಿ ಭಾರತ ಎದುರು ಆತಿಥೇಯ ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿತು. ಈ ಮೂಲಕ ಆತಿಥೇಯರ ಸಾಲಿನಿಂದ ಅತಿಥಿಯಾಗಿ ಹೋದ ಪಾಕ್​ ತಂಡಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ರೋಹಿತ್ ಶರ್ಮ ಪಡೆ ವಿರುದ್ಧ 6 ವಿಕೆಟ್​ಗಳ ಸೋಲನ್ನು ಅನುಭವಿಸಿದ ಪಾಕಿಸ್ತಾನಕ್ಕೆ ಭಾರೀ ಟೀಕೆ, ಛೀಮಾರಿಗಳು ಹರಿದುಬಂದಿವೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ಎದುರು 60 ರನ್​ಗಳಿಂದ ಸೋತಿದ್ದ ಪಾಕ್​, ಟೀಮ್ ಇಂಡಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಗೆದ್ದು ಬೀಗುವ ಭರವಸೆಯನ್ನು ಬಲವಾಗಿ ಹೊಂದಿತ್ತು. ಆದರೆ, ವಿರಾಟ್​ ಕೊಹ್ಲಿ, ಶುಭಮನ್​ ಗಿಲ್​ ಅಬ್ಬರದ ಬ್ಯಾಟಿಂಗ್​ನಿಂದ ಆ ಕನಸು ನುಚ್ಚುನೂರಾಯಿತು. ಜತೆಗೆ ಟೂರ್ನಿಯಿಂದಲೂ ಅಧಿಕೃತವಾಗಿ ಹೊರಬಿದ್ದಿತು.

ಪ್ರಸ್ತುತ ಟೂರ್ನಿಯಿಂದ ಬಾಂಗ್ಲಾದೇಶ ಮತ್ತು ಆತಿಥೇಯರು ಹೊರಬಿದ್ದ ವಿಷಯ ಕ್ರಿಕೆಟ್ ಪ್ರೇಮಿಗಳಿಗೆ ತಿಳಿದಿದೆ. ಒಂದೆಡೆ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಪಾಕ್​ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಪಾಕಿಸ್ತಾನ ಹಿರಿಯ ಆಟಗಾರ ವಾಸಿಮ್ ಅಕ್ರಂ ಗರಂ ಆಗಿದ್ದಾರೆ. ಪಾಕಿಸ್ತಾನ ತಮ್ಮ ಪ್ರತಿಷ್ಠೆ, ಹೆಮ್ಮೆಗಾಗಿ ಪಂದ್ಯವಾನ್ನುಡುತ್ತಿದೆ ಎಂದು ನಿಮಗೆ ಅನಿಸುತ್ತಿದೆಯೇ ಎಂಬ ಪ್ರಶ್ನೆಗೆ ಅಕ್ರಂ ಕೆಂಡಾಮಂಡಲಗೊಂಡಿದ್ದಾರೆ.

"ಯಾವ ಪ್ರತಿಷ್ಠೆ, ಏನು ಹೆಮ್ಮೆ? ಎಷ್ಟೋ ಬಾರಿ ಹೇಳಿದ್ದೀನಿ ಇಂತಹ ಪ್ರಶ್ನೆಯನ್ನು ನನಗೆ ಕೇಳಬೇಡಿ ಎಂದು. ಮುಂದಿನ ಸುತ್ತಿಗೆ ಪ್ರವೇಶಿಸುವ ಸಾಧ್ಯತೆಯಿದೆ ಎನ್ನುವಾಗ ಅಲ್ಲಿ ನೀವು ಪ್ರತಿಷ್ಠೆಗಾಗಿ ಆಡುತ್ತೀರಿ, ಆಡಬಹುದು. ಈ ಪಂದ್ಯದ ನಂತರ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಎರಡೂ ತಂಡಗಳು ತವರಿಗೆ ಹೋಗುತ್ತವೆ. ಸ್ಪರ್ಧಿಸಿ ಮನೆಗೆ ಹೋಗಿ ಅಷ್ಟೇ" ಎಂದು ಹೇಳಿದ್ದಾರೆ,(ಏಜೆನ್ಸೀಸ್).