ಕ್ರೀಡೆ

ಭಾರತ ಹೇಳುವುದಕ್ಕೂ ಮುಂಚೆ ನೀವೇ ಹೇಳಿಬಿಡಿ: ಸ್ಫೋಟಕ ಹೇಳಿಕೆ ನೀಡಿದ ಪಾಕ್​ ಮಾಜಿ ಕ್ರಿಕೆಟಿಗ | Champions Trophy

Champions Trophy : ಚಾಂಪಿಯನ್ಸ್​ ಟ್ರೋಫಿ-2025 ವಿಚಾರವಾಗಿ ಪಾಕಿಸ್ತಾನದ ಮಾಜಿ ನಾಯಕ ರಶೀದ್​ ಲತೀಫ್ ಅವರು ಬಹುದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.​

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಲತೀಫ್​, ಚಾಂಪಿಯನ್ಸ್​ ಟ್ರೋಫಿ ನಡೆಯಬಾರದು. ಬಿಸಿಸಿಐ ಮುಂದಿನ ಕ್ರಮ ತೆಗೆದುಕೊಳ್ಳುವ ಮುಂಚೆಯೇ ಪಾಕಿಸ್ತಾನ ಚಾಂಪಿಯನ್ಸ್​ ಟ್ರೋಫಿಗೆ ನೋ ಎಂದು ಹೇಳಬೇಕು. ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಇಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡರೆ ವಿಶ್ವ ಕ್ರಿಕೆಟ್​ ಸಮುದಾಯಕ್ಕೆ ಒಂದು ದೊಡ್ಡ ಸಂದೇಶ ರವಾನೆಯಾಗಲಿದೆ ಎಂದು ಲತೀಫ್​ ಹೇಳಿದರು.

ಅಂದಹಾಗೆ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಬೇಕಿದೆ. ಆದರೆ, ಭದ್ರತಾ ದೃಷ್ಟಿಯಿಂದ ಟೀಮ್​ ಇಂಡಿಯಾ, ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದೆ. ಹೀಗಾಗಿ ಭಾರತದ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ದುಬೈನಲ್ಲಿ ನಡೆಸಲು ಪಿಸಿಬಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಸಲಹೆ ನೀಡಿದೆ. ಇದಕ್ಕೆ ಒಪ್ಪಿಕೊಂಡಿರುವ ಪಿಸಿಬಿ, ಐಸಿಸಿ ಮುಂದೆ ಷರತ್ತುಗಳನ್ನಿಟ್ಟಿದೆ. ಅದೇನೆಂದರೆ, ಮುಂದಿನ 7 ವರ್ಷಗಳಲ್ಲಿ ನಡೆಯಲ್ಲಿರುವ ಐಸಿಸಿ ಟೂರ್ನಿಗಳನ್ನು ಹೈಬ್ರಿಡ್ ಮಾದರಿಯಲ್ಲೇ ನಡೆಸಬೇಕು ಎಂದಿದೆ. ಅಲ್ಲದೆ, ಪಾಕ್​ ಕ್ರಿಕೆಟ್​ಗೆ ನೀಡುವ ಅನುದಾನವನ್ನೂ ಹೆಚ್ಚಿಸಬೇಕೆಂದು ಕೋರಿದೆ. ಆದರೆ, ಈ ವಿಚಾರದಲ್ಲಿ ಐಸಿಸಿ ಇನ್ನೂ ತೀರ್ಮಾನ ಕೈಗೊಳ್ಳಬೇಕಿದೆ.

ಇದೆಲ್ಲದರ ನಡುವೆ ಪಾಕ್​ ಮಾಜಿ ನಾಯಕ ಲತೀಫ್​, ಚಾಂಪಿಯನ್ಸ್​ ಟ್ರೋಫಿಯನ್ನು ನಡೆಸಬಾರದು ಎಂದು ಪಿಸಿಬಿಗೆ ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿಯನ್ನು ಅವರು ನಿರಾಕರಿಸುವ ಮೊದಲು ನೀವೇ ಇಲ್ಲ ಎಂದು ಹೇಳಬೇಕು. ಅದು ಅಫ್ಘಾನ್​ ಯುದ್ಧ ಅಥವಾ ಕ್ರಿಕೆಟ್​ ಆಗಿರಲಿ ಯಾವಾಗಲೂ ನಾವೇ ಬಲಿಪಶುಗಳಾಗುತ್ತೇವೆ. ಪಿಸಿಬಿ, ಎಸಿಬಿ ಮತ್ತು ಐಸಿಸಿ ಎಲ್ಲವೂ ಒಂದೇ. ಇವು ಬಿಸಿಸಿಐ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಆದರೆ, ಎಲ್ಲರು ಪಾಕಿಸ್ತಾನವನ್ನು ಮುಂದೆ ಬಿಟ್ಟು ಆಟವಾಡುತ್ತಾರೆ. ನಾವು ಕೂಡ ಕೈ ಜೋಡಿಸಿ, ಹೋರಾಡಬಹುದು ಆದರೆ, ಭಾರತ ಏನಾದರೂ ಬಹಿಷ್ಕರಿಸಿದರೆ ನಾವು ಎಲ್ಲಿ ಹೋಗಿ ನಿಲ್ಲುತ್ತೇವೆ ಎಂಬ ಭಯ ಮಾತ್ರ ಕಾಡುತ್ತದೆ ಎಂದರು.

ಚಾಂಪಿಯನ್ಸ್ ಟ್ರೋಫಿ 2025 ಪಾಕಿಸ್ತಾನದಲ್ಲಿ ನಡೆಯಲಿದೆಯೇ? ಇಲ್ಲವೇ? ಎಂಬ ಅನುಮಾನ ಇನ್ನೂ ಕಾಡುತ್ತಿದೆ. ಸಾಕಷ್ಟು ಬಿಕ್ಕಟ್ಟಿನ ನಡುವೆ ಮುಂದಿನ ವರ್ಷದ ಪ್ರತಿಷ್ಠಿತ ಟೂರ್ನಿಯ ನಿರ್ಧಾರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)