ಕ್ರೀಡೆ

ರದ್ದಾದ 2 ಪಂದ್ಯಗಳ ಟಿಕೆಟ್​ ಹಣ ವಾಪಾಸ್ ಕೊಡಲು ಪಿಸಿಬಿ ನಿರ್ಧಾರ! ಷರತ್ತುಗಳು ಅನ್ವಯ | Champions Trophy

Champions Trophy: ಪ್ರಸಕ್ತ ದುಬೈ ಮತ್ತು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಈಗಾಗಲೇ ಎರಡು ಪಂದ್ಯಗಳು ಭಾರೀ ಮಳೆಯಿಂದ ರದ್ದಾಗಿದೆ. ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಎರಡು ಪಂದ್ಯಗಳು ಧಾರಕಾರ ಮಳೆಗೆ ರದ್ದಾಯಿತು. ಈ ವಿಷಯಕ್ಕೆ ಕೆರಳಿದ ಕ್ರಿಕೆಟ್ ಅಭಿಮಾನಿಗಳು, ಆತಿಥೇಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ವ್ಯಾಪಕ ಟ್ರೋಲ್, ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಈ ಎಲ್ಲಾ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದ ಪಿಸಿಬಿ, ರದ್ದಾದ ಎರಡು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಗಳ ಟಿಕೆಟ್ ಹಣವನ್ನು ಸಂಪೂರ್ಣ ಮರುಪಾವತಿಸಲು ನಾವು ನಿರ್ಧರಿಸಿದ್ದೇವೆ ಎಂದು ತಿಳಿಸಿದೆ. ಫೆಬ್ರವರಿ 25ರಂದು ಆಸ್ಟ್ರೇಲಿಯಾ ವಿರುದ್ಧದ ದಕ್ಷಿಣ ಆಫ್ರಿಕಾ ಮತ್ತು ಫೆಬ್ರವರಿ 27ರಂದು ಬಾಂಗ್ಲಾದೇಶ ವಿರುದ್ಧದ ಪಾಕಿಸ್ತಾನ ಪಂದ್ಯಗಳು ಒಂದು ಓವರ್​ ಕೂಡ ನಡೆಯದೆ ರದ್ದಾಯಿತು. ಮಳೆಯಿಂದ ಒದ್ದೆಯಾದ ಮೈದಾನವನ್ನು ನಿಗದಿತ ಸಮಯದಲ್ಲಿ ಒಣಗಿಸಲು ವಿಫಲವಾದ ಪಿಸಿಬಿ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಯಿತು. ಇದು ಪಿಸಿಬಿಗೆ ಭಾರೀ ಮುಖಭಂಗ ಉಂಟುಮಾಡಿತು.

ಐಸಿಸಿ ನೀತಿಯ ಪ್ರಕಾರ ಟಿಕೆಟ್‌ಗಳನ್ನು ಮರುಪಾವತಿಸುವುದಾಗಿ ಪಿಸಿಬಿ ಘೋಷಿಸಿದ್ದೇ ಆದರೂ ಅದಕ್ಕೆ ಕೆಲವು ಷರತ್ತನ್ನು ವಿಧಿಸಿದೆ. ಈ ಮೂಲಕವೇ ಸ್ಟೇಡಿಯಂಗೆ ಹಾಜರಾಗಿದ್ದ ಅಭಿಮಾನಿಗಳು ಟಿಕೆಟ್ ಹಣವನ್ನು ವಾಪಾಸ್​ ಪಡೆಯಬಹುದು ಎಂದು ಹೇಳಿದೆ. ಆದಾಗ್ಯೂ, ಟಿಕೆಟ್ ಹೊಂದಿರುವವರು ತಮ್ಮ ಮರುಪಾವತಿಗಾಗಿ ಈ ಷರತ್ತುಗಳನ್ನು ಅನುಸರಿಸಬೇಕು ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಪಂದ್ಯದ ಟಿಕೆಟ್ ಹೊಂದಿರುವವರು (ಬಾಕ್ಸ್​ ಮತ್ತು ಪಿಸಿಬಿ ಗ್ಯಾಲರಿ) ಮರುಪಾವತಿಗೆ ಅರ್ಹರಾಗಿರುವುದಿಲ್ಲ ಎಂದು ಒತ್ತಿ ಹೇಳಿದೆ.

ಏನದು ಷರತ್ತು?

  • ಟಿಕೆಟ್ ಹೊಂದಿರುವವರು ಮಾರ್ಚ್ 10 ಮತ್ತು ಮಾರ್ಚ್ 14ರ ನಡುವೆ ಆಯ್ದ ಟಿಸಿಎಸ್ ಔಟ್‌ಲೆಟ್‌ಗಳಲ್ಲಿ ಕೆಲವು ಮಾನದಂಡಗಳನ್ನು ಪೂರೈಸುವ ಮೂಲಕ ತಮ್ಮ ಮರುಪಾವತಿಯನ್ನು ಪಡೆಯಬಹುದು ಎಂದು ಪಿಸಿಬಿ ಹೇಳಿದೆ.
  • ಖರೀದಿಸಿದ ಸಾಕ್ಷಿಯಾಗಿ ಮೂಲ/ಹಾನಿಗೊಳಗಾಗದ ಟಿಕೆಟ್ ಅನ್ನು ಹಿಂತಿರುಗಿಸಬೇಕು.
  • ಟಿಕೆಟ್ ಖರೀದಿ ಮಾಡಿದವರು ಮರುಪಾವತಿ ಪಡೆಯಲು ಖುದ್ದಾಗಿ ಟಿಸಿಎಸ್ ಔಟ್‌ಲೆಟ್‌ಗೆ ನೇರವಾಗಿ ಭೇಟಿ ನೀಡಬೇಕು.
  • ಟಿಕೆಟ್​ ಪಡೆದವರ ಪರವಾಗಿ ಇನ್ನಾರೂ ಮರುಪಾವತಿ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ,(ಏಜೆನ್ಸೀಸ್).