ಕ್ರೀಡೆ

ಸಿಕ್ಕ ಅವಕಾಶವನ್ನು ಬಳಸಿಕೊಳ್ಳದ ನೀವು ಯಾವ ಸೀಮೆಯ ಚಾಂಪಿಯನ್ಸ್​; ಹೀನಾಯವಾಗಿ ಟ್ರೋಲ್​ ಆದ ಯಂಗ್​ ಇಂಡಿಯಾ

ಹರಾರೆ: ನೂತನ ಟಿ20 ವಿಶ್ವಚಾಂಪಿಯನ್​ ಭಾರತ ತಂಡವನ್ನು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೋಲಿಸುವ ಮೂಲಕ ಜಿಂಬಾಬ್ವೆ ಶಾಕ್​ ನೀಡಿದ್ದು, ಯುವ ಭಾರತ ತಂಡವನ್ನು ಹೀನಾಯ ವಾಗಿ ಟ್ರೋಲ್​ ಮಾಡಲಾಗುತ್ತಿದೆ. ಜಿಂಬಾಬ್ವೆಯ ಚಾಣಾಕ್ಷ ಆಟಕ್ಕೆ ಯುವ ಭಾರತ ತಲೆಬಾಗಿದ್ದು, ಐಪಿಎಲ್​ನಲ್ಲಿ ಮಿಂಚಿ ಭರವಸೆಯ ಆಟಗಾರರು ಎಂಬ ಹಣೆಪಟ್ಟಿಯನ್ನು ಪಡೆದಿದ್ದ ಆಟಗಾರರನ್ನು ಹೀನಾಯವಾಗಿ ಟ್ರೋಲ್​ ಮಾಡಲಾಗುತ್ತಿದ್ದು, ನೀವು ಯಾವ ಸೀಮೆಯ ಚಾಂಪಿಯನ್ಸ್​ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಟಾಸ್​ ಗೆದ್ದು ಮೊದಲು ಆತಿಥೇಯರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ ಭಾರತ ತಂಡವು ಎದುರಾಳಿಗಳನ್ನು 20 ಓವರ್​ಗಳಲ್ಲಿ 115 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸುಲಭ ಗುರಿ ಬೆನ್ನತ್ತಿದ್ದ ಟೀಮ್​ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡಿದ ಜಿಂಬಾಬ್ವೆ ಬೌಲರ್​ಗಳು ಪ್ರವಾಸಿ ತಂಡವನ್ನು 19.5 ಓವರ್​ಗಳಲ್ಲಿ 102 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಭಾರತದ ಪರ ಪದಾರ್ಪಣೆ ಮಾಡಿದ ಧ್ರುವ್​ ಜುರೆಲ್​, ಅಭಿಷೇಕ್​ ಶರ್ಮ ಮತ್ತು ರಿಯಾನ್​ ಪರಾಗ್​ ಸಿಕ್ಕ ಅವಕಾಶವನ್ನು ಬಳಸಿಕೊಳ್ಳದೆ ನಿರಾಸೆಯನ್ನುಂಟು ಮಾಡಿದರು.

ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ಭರವಸೆಯ ಆಟಗಾರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಧ್ರುವ್​ ಜುರೆಲ್​, ಅಭಿಷೇಕ್​ ಶರ್ಮ ಮತ್ತು ರಿಯಾನ್​ ಪರಾಗ್​ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಈ ವಿಚಾರವಾಗಿ ರಿಯಾನ್​ ಪರಾಗ್​ರನ್ನು ಹೆಚ್ಚು ಟ್ರೋಲ್​ ಮಾಡಲಾಗುತ್ತಿದೆ. ಏಕೆಂದರೆ ಇತ್ತೀಚಿಗೆ ರಿಯಾನ್​ ಪರಾಗ್​ ಸಂದರ್ಶನ ಒಂದರಲ್ಲಿ ನನ್ನನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿಲ್ಲ ಹಾಗಾಗಿ ನಾನು ಈ ಬಾರಿ ಪಂದ್ಯಗಳನ್ನು ನೋಡುವುದಿಲ್ಲ ಎಂದು ಹೇಳಿ ಟೀಕಗೆ ಗುರಿಯಾಗಿದ್ದರು. ನೀನು ಯಾವ ಸೀಮೆಯ ಆಟಗಾರ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ನಿನ್ನನ್ನು ವಿಶ್ವಕಪ್​ಗೆ ಆಯ್ಕೆ ಮಾಡಬೇಕೆನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದ್ದಾರೆ.

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ಯುವ ಭಾರತ ತಂಡವು ತೀವ್ರ ಟೀಕೆಗೆ ಗುರಿಯಾಗಿದ್ದು, ಜುಲೈ 07ರಂದು ನಡೆಯುವ ಎರಡನೇ ಟಿ20 ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡಲಿದೆಯಾ ಅಥವಾ ಸೋಲಿನ ಸುಳಿಗೆ ಸಿಲುಕಲಿದೆಯಾ ಎಂದು ಕಾದು ನೋಡಬೇಕಿದೆ.