ಮುಂಬೈ: ಭಾರತದ ನಾರಿ ಪಡೆ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವುದು ಸದ್ಯದ ಹೆಮ್ಮೆಯ ಸಂಗತಿಯಾಗಿದೆ. ಇದುವರೆಗೂ ಕ್ರಿಕೆಟ್ ಅನ್ನು ಜೆಂಟಲ್ಮೆನ್ ಗೇಮ್ ಎನ್ನುತ್ತಿದ್ದರು ಆದರೆ, ಚೊಚ್ಚಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ( World Cup ) ಟ್ರೋಫಿ ಎತ್ತಿ ಹಿಡಿಯುವ ಮೂಲಕ ಆ ಮಾತನ್ನು ನಮ್ಮ ಮಹಿಳಾಮಣಿಗಳು ಇಂದು ಸುಳ್ಳು ಮಾಡಿದ್ದಾರೆ.
ಭಾರತದ ಮಹಿಳಾ ತಂಡ 2025ರ ಮಹಿಳಾ ಏಕದಿನ ವಿಶ್ವಕಪ್ ಗೆದ್ದಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ವಿಶ್ವಕಪ್ ಎತ್ತಿಹಿಡಿಯುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ಬರೆದಿದೆ. ಈ ಗೆಲುವಿನೊಂದಿಗೆ ಮಹಿಳಾ ಕ್ರಿಕೆಟ್‌ಗೆ ಇನ್ನಷ್ಟು ಒಳ್ಳೆಯ ದಿನಗಳು ಬರುವುದರಲ್ಲಿ ಸಂದೇಹವೇ ಇಲ್ಲ. ಯಾವಾಗ ನಮ್ಮ ನಾರಿಯರು ವಿಶ್ವಕಪ್ ಎತ್ತಿ ಹಿಡಿದರೋ ಅಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ಅವರ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಎಷ್ಟರ ಮಟ್ಟಿಗೆ ಅಂದರೆ, ಪುರುಷ ತಂಡದಷ್ಟೇ ಸಮಾನವಾಗಿ ಕ್ರೇಜ್ ಸೃಷ್ಟಿಯಾಗಿದೆ. ಈ ಶುಭ ಸಂದರ್ಭದಲ್ಲೇ ಕ್ರಿಕೆಟ್ ಅಭಿಮಾನಿಗಳು ಮತ್ತು ಚಲನಚಿತ್ರ ಪ್ರೇಮಿಗಳು ಒಂದು ಸಿನಿಮಾವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಯಾವುದು ಆ ಸಿನಿಮಾ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಕ್ರಿಕೆಟ್ ಅಭಿಮಾನಿಗಳು 'ಚಕ್ಡಾ ಎಕ್ಸ್‌ಪ್ರೆಸ್' ಚಿತ್ರವನ್ನು ಬಿಡುಗಡೆ ಮಾಡುವಂತೆ ಕೇಳುತ್ತಿದ್ದಾರೆ. ಅಂದಹಾಗೆ, ಚಕ್ಡಾ ಎಕ್ಸ್‌ಪ್ರೆಸ್, ಮಾಜಿ ಕ್ರಿಕೆಟರ್ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ಆಗಿದೆ. ಗೋಸ್ವಾಮಿ ಅವರ ಪಾತ್ರದಲ್ಲಿ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ನಟಿಸಿದ್ದಾರೆ. 2022ರಲ್ಲೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಅಲ್ಲದೆ, ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಟ್ರೈಲರ್ ಬಿಡುಗಡೆಯಾಗಿ ಮೂರು ವರ್ಷಗಳೇ ಕಳೆದಿವೆ. ಆದರೆ, ಸಿನಿಮಾ ಮಾತ್ರ ಇನ್ನೂ ಬಿಡುಗಡೆಯಾಗಿಲ್ಲ.
ಭಾರತೀಯ ಮಹಿಳಾ ತಂಡಕ್ಕೆ ವಿಶ್ವಕಪ್ ತಂದುಕೊಡಲು ವರ್ಷಗಳಿಂದ ಹೋರಾಡಿದವರಲ್ಲಿ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಸೇರಿದ್ದಾರೆ. ಈಗ, ವಿಶ್ವಕಪ್ ಗೆದ್ದ ನಂತರ ಮಹಿಳಾ ತಂಡ ಟ್ರೋಫಿಯನ್ನು ತೆಗೆದುಕೊಂಡು ಈ ಇಬ್ಬರ ಕೈಯಲ್ಲಿ ಇಟ್ಟಿತು. ಟ್ರೋಫಿಯನ್ನು ನೋಡಿದಾಗ ಮಿಥಾಲಿ ಮತ್ತು ಜೂಲನ್ ಭಾವುಕರಾದರು. 20 ವರ್ಷಗಳಿಂದ ಪ್ರಯತ್ನಿಸಿದ್ದೇವೆ ಆದರೆ, ಈಗ ಅದನ್ನು ಸಾಧಿಸಿದ್ದೇವೆ ಎಂದು ಅವರು ಭಾವುಕರಾಗಿದರು.
ಇಬ್ಬರು ಹಿರಿಯ ಮಹಿಳಾ ಕ್ರಿಕೆಟಿಗರು ಭಾವುಕರಾಗಿದ್ದನ್ನು ನೋಡಿದ ಅಭಿಮಾನಿಗಳು ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆ ಆಧಾರಿತ ಚಕ್ಡಾ ಎಕ್ಸ್‌ಪ್ರೆಸ್ ಚಿತ್ರವನ್ನು ಬಿಡುಗಡೆ ಮಾಡಲು ಇದು ಒಳ್ಳೆಯ ಸಮಯ. ದಯವಿಟ್ಟು ಈಗಲಾದರೂ ಸಿನಿಮಾ ಬಿಡುಗಡೆ ಮಾಡಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
ಇದಲ್ಲದೆ, ಈ ಚಿತ್ರವು ಅನುಷ್ಕಾ ಶರ್ಮಾ ಅವರ ಪುನರಾಗಮನದ ಚಿತ್ರವೂ ಆಗಿದೆ. ಹೀಗಾಗಿ, ಅವರ ಅಭಿಮಾನಿಗಳು ಈ ಚಿತ್ರವನ್ನು ಈಗಲೇ ಬಿಡುಗಡೆ ಮಾಡುವಂತೆ ಕೇಳುತ್ತಿದ್ದಾರೆ. ಮೂಲ ಚಿತ್ರದಲ್ಲಿ, ಜೂಲನ್ ಗೋಸ್ವಾಮಿ ವಿಶ್ವಕಪ್ ಗೆಲ್ಲದೆಯೇ ನಿವೃತ್ತಿ ಘೋಷಿಸುತ್ತಾರೆ. ಇದೀಗ ಮಹಿಳಾ ತಂಡವು ವಿಶ್ವಕಪ್ ಗೆದ್ದಿರುವುದರಿಂದ, ಇನ್ನೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿ ಬಿಡುಗಡೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ, ಚಕ್ಡಾ ಎಕ್ಸ್‌ಪ್ರೆಸ್ ಚಿತ್ರ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ. (ಏಜೆನ್ಸೀಸ್)