ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ಮಾಜಿ ಕೋಚ್ ಗುರ್ದಯಾಳ್ ಸಿಂಗ್ ಭಂಗು ಶನಿವಾರ ನಿಧನರಾದರು. ಕೆನಡಾದ ಸರ್ರೆಯಲ್ಲಿ ಕೊನೆಯುಸಿರೆಳೆದ ಗುರ್ದಯಾಳ್ 86 ವರ್ಷ ವಯಸ್ಸಾಗಿತ್ತು. 2002ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ತಂಡ ಐತಿಹಾಸಿಕ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಗುರ್ದಯಾಳ್ ನಿಧನಕ್ಕೆ ಹಾಕಿ ಇಂಡಿಯಾ ಸಂತಾಪ ಸೂಚಿಸಿದೆ.
ಕಾಮನ್ವೆಲ್ತ್ ಗೇಮ್ಸ್ನ ಸ್ಮರಣೀಯ ಗೆಲುವು, 2007ರಲ್ಲಿ ಬಿಡುಗಡೆಯಾದ ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಚಕ್ ದೇ ಇಂಡಿಯಾ ಚಲನಚಿತ್ರದ ಚಿತ್ರ ಕಥೆಗೆ ಸ್ಫೂರ್ತಿ ಆಗಿತ್ತು. ಜತೆಗೆ ಶಾರುಖ್ ಅವರ ಪಾತ್ರಕ್ಕೆ ಗುರ್ದಯಾಳ್ ಪ್ರೇರಣೆ ಎನ್ನಲಾಗಿದೆ. 1972 ರಿಂದ 1976ರವರೆಗೆ ಗುರ್ದಯಾಳ್ ನೈಜೀರಿಯಾ ಮಹಿಳಾ ಹಾಕಿ ತಂಡದ ಕೋಚ್ ಆಗಿದ್ದರು. 1976ರಲ್ಲಿ ನೈಜೀರಿಯಾ ಹಾಕಿ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. 1998ರಲ್ಲಿ ಗುರ್ದಯಾಳ್ ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತ ಮಹಿಳಾ ತಂಡ ಬ್ಯಾಂಕಾಕ್ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಜಯಿಸಿತ್ತು. 2000ರ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಗುರ್ದಯಾಳ್, ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೊದಲ ಹಾಕಿ ತರಬೇತುದಾರ ಎಂಬ ಹೆಗ್ಗಳಿಕೆಯೂ ಹೊಂದಿದ್ದಾರೆ.
ಭಾರತೀಯ ಹಾಕಿಯ ಐತಿಹಾಸಿಕ ಕ್ಷಣ
ಭಾರತೀಯ ಮಹಿಳಾ ಹಾಕಿಯ ಅತ್ಯಂತ ಸ್ಮರಣೀಯ ಗೆಲುವುಗಳಲ್ಲಿ ಭಂಗು ಅವರ ಹೆಸರು ಎಂದೆಂದಿಗೂ ಚಿರಸ್ಥಾಯಿಯಾಗಿರುತ್ತದೆ. ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ಮ್ಯಾಂಚೆಸ್ಟರ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 3-2 ಅಂತರದಿಂದ ರೋಚಕ ಜಯ ಸಾಧಿಸಿ ಕಾಮನ್ವೆಲ್ತ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಐತಿಹಾಸಿಕ ಸಾಧನೆಯು ದೇಶದ ಕ್ರೀಡಾ ಕ್ಷೇತ್ರದಲ್ಲಿ ದೀರ್ಘಕಾಲದ ಪ್ರಭಾವ ಬೀರಿತು.
ನಾಯಕಿ ಸೂರಜ್ ಲತಾ ದೇವಿ ನೇತೃತ್ವದ ಭಾರತ ತಂಡವು ಸರಣಿಯುದ್ದಕ್ಕೂ ಕಠಿಣ ಸವಾಲುಗಳನ್ನು ಎದುರಿಸಿ ಮುನ್ನಡೆದಿತ್ತು. ಹೆಚ್ಚುವರಿ ಸಮಯದಲ್ಲಿ ಮಮತಾ ಖರಬ್ ಬಾರಿಸಿದ ನಿರ್ಣಾಯಕ ಗೋಲಿನಿಂದ ಭಾರತ ಗೆಲುವಿನ ನಗೆ ಬೀರಿತು. ಈ ಗೆಲುವು ಕೇವಲ ಮೈದಾನಕ್ಕೆ ಮಾತ್ರ ಸೀಮಿತವಾಗದೆ, 2007 ರಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅಭಿನಯದ ಪ್ರಸಿದ್ಧ 'ಚಕ್ ದೇ! ಇಂಡಿಯಾ' ಸಿನಿಮಾದ ಕಥಾಹಂದರಕ್ಕೂ ಪ್ರೇರಣೆಯಾಯಿತು.
ಸಿನಿಮಾದಲ್ಲಿ ಶಾರುಖ್ ಖಾನ್ ಅಭಿನಯಿಸಿದ 'ಕಬೀರ್ ಖಾನ್' ಪಾತ್ರವು ಮಾಜಿ ಗೋಲ್ ಕೀಪರ್ ಮಿರ್ ರಂಜಾನ್ ನೇಗಿ ಅವರ ಜೀವನದಿಂದ ಪ್ರೇರಿತವಾಗಿದ್ದರೆ, ಮ್ಯಾಂಚೆಸ್ಟರ್ನಲ್ಲಿ ತಂಡದ ಗೆಲುವಿನ ತಂತ್ರ ಹೆಣೆದ ನಿಜವಾದ ಸೂತ್ರಧಾರ ಗುರ್ದಯಾಳ್ ಸಿಂಗ್ ಭಂಗು ಅವರಾಗಿದ್ದರು.
ಇಂಗ್ಲೆಂಡ್ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ ಅವರ ತಂತ್ರಗಾರಿಕೆ ಅತ್ಯಂತ ನಿರ್ಣಾಯಕವಾಗಿತ್ತು. ಅಂತಿಮ ಹೂಟರ್ ಬಾರಿಸಿದ ನಂತರವೂ ಪೆನಾಲ್ಟಿ ಕಾರ್ನರ್ ಮುಂದುವರಿಯಬಹುದು ಎಂಬ ನಿಯಮದ ಬಗ್ಗೆ ಭಂಗು ಅವರು ಆಟಗಾರ್ತಿಯರಿಗೆ ಮೊದಲೇ ಸ್ಪಷ್ಟ ಸೂಚನೆ ನೀಡಿದ್ದರು. ಪಂದ್ಯ ಮುಗಿಯುವವರೆಗೆ ಎಲ್ಲೂ ಗಮನ ಸಡಿಲಿಸದಂತೆ ತಿಳಿಸಿದ್ದರು.
ಈ ಸಲಹೆ ಹೆಚ್ಚುವರಿ ಸಮಯದಲ್ಲಿ ವರದಾನ ಆಯಿತು. ಹೂಟರ್ ಸೌಂಡ್ ಕೇಳಿದ ತಕ್ಷಣ ಇಂಗ್ಲೆಂಡ್ ರಕ್ಷಣಾ ಆಟಗಾರ್ತಿಯರು ಕ್ಷಣಕಾಲ ಆಟ ನಿಲ್ಲಿಸಿದರು, ಆದರೆ ಭಾರತೀಯ ಆಟಗಾರ್ತಿಯರು ತಮ್ಮ ದಾಳಿಯನ್ನು ಮುಂದುವರಿಸಿದರು. ಇದೇ ಅವಕಾಶವನ್ನು ಬಳಸಿಕೊಂಡ ಮಮತಾ ಖರಬ್ ರಿಬೌಂಡ್ ಆದ ಚೆಂಡನ್ನು ಗೋಲ್ ಪೋಸ್ಟ್ಗೆ ತಳ್ಳಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಗೋಲನ್ನು ಆರಂಭದಲ್ಲಿ ನಿರಾಕರಿಸಲಾಗಿತ್ತಾದರೂ, ನಂತರ ಅಧಿಕಾರಿಗಳು ನಿರ್ಧಾರವನ್ನು ಬದಲಾಯಿಸಿ ಗೋಲ್ ಅನ್ನು ಎತ್ತಿಹಿಡಿದರು.
ಅವಿಭಜಿತ ಭಾರತದ ಲಾಯಲ್ಪುರದಲ್ಲಿ (ಈಗಿನ ಪಾಕಿಸ್ತಾನದ ಫೈಸಲಾಬಾದ್) ಜನಿಸಿದ ಭಂಗು, ಅಂಬಾಲಾದಲ್ಲಿ ಬೆಳೆದು ವಿಶ್ವವಿದ್ಯಾಲಯ ಮಟ್ಟದಲ್ಲಿ ಹಾಕಿ ಆಡಿದರು. ನಂತರ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ (NIS) ತರಬೇತುದಾರ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅಲ್ಲಿ ಹಾಕಿ ದಂತಕಥೆ ಧ್ಯಾನ್ಚಂದ್ ಹಾಗೂ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಬಲ್ಕಿಶನ್ ಸಿಂಗ್ ಅವರಿಂದ ತರಬೇತಿ ಪಡೆಯುವ ಅವಕಾಶ ಅವರಿಗೆ ಲಭಿಸಿತು.
ಭಾರತೀಯ ಮಹಿಳಾ ತಂಡದ ಹೊಣೆ ವಹಿಸಿಕೊಳ್ಳುವ ಮೊದಲು ಭಂಗು ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಅಪಾರ ಅನುಭವವಿತ್ತು. 1972 ರಿಂದ 1976ರ ಅವಧಿಯಲ್ಲಿ ನೈಜೀರಿಯಾ ಮಹಿಳಾ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ಅವರು, 1976ರಲ್ಲಿ ನೈಜೀರಿಯಾ ಮೊದಲ ಬಾರಿಗೆ ಮಹಿಳಾ ಹಾಕಿ ವಿಶ್ವಕಪ್ಗೆ ಅರ್ಹತೆ ಪಡೆಯುವಂತೆ ಮಾಡಿದ್ದರು.
1998ರ ವಿಶ್ವಕಪ್ನಲ್ಲಿ ಭಾರತ ತಂಡ 12ನೇ ಸ್ಥಾನಕ್ಕೆ ಕುಸಿದ ನಂತರ ಭಂಗು ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ಅವರ ಮಾರ್ಗದರ್ಶನದಲ್ಲಿ ಭಾರತ ಅದೇ ವರ್ಷ ಬ್ಯಾಂಕಾಕ್ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿತು. ಇದು 2002ರ ಕಾಮನ್ವೆಲ್ತ್ ಗೇಮ್ಸ್ ಸಾಧನೆಗೆ ಬಲವಾದ ತಡಿಪಾಯ ಹಾಕಿತು.