ಕ್ರೀಡೆ

ವಿಶ್ವಕಪ್​ನಿಂದ ಚಾಹಲ್​ ಹೊರಕ್ಕೆ, ಪತ್ನಿ ಧನಶ್ರೀಗೆ ಸಿಕ್ಕಿತು ಚಾನ್ಸ್​!

ಬೆಂಗಳೂರು: ಕಳೆದ 2019ರ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡದ ಪ್ರಮುಖ ಸ್ಪಿನ್ನರ್​ ಆಗಿದ್ದ ಯಜುವೇಂದ್ರ ಚಾಹಲ್​ ಈ ಬಾರಿ ತವರು ನೆಲದಲ್ಲಿ ವಿಶ್ವಕಪ್​ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ವಿಶ್ವಕಪ್​ ತಂಡದಲ್ಲಿ ಅವರಿಗೆ ಸ್ಥಾನ ಲಭಿಸಿಲ್ಲ. ಅವರ ಬದಲಿಗೆ ಅಕ್ಷರ್​ ಪಟೇಲ್​ಗೆ ಅದೃಷ್ಟ ಒಲಿದಿತ್ತು. ಈಗ ಅಕ್ಷರ್​ ಗಾಯಗೊಂಡಿದ್ದರೂ, ಆರ್​. ಅಶ್ವಿನ್​ ಮತ್ತು ವಾಷಿಂಗ್ಟನ್​ ಸುಂದರ್​ ಈಗ ಬದಲಿ ಸ್ಪಿನ್ನರ್​ಗಳಾಗಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಕೊನೇಕ್ಷಣದಲ್ಲಿ ತಂಡದಲ್ಲಿ ಸ್ಥಾನ ಸಂಪಾದಿಸುವ ಚಾಹಲ್​ ಆಸೆಯೂ ದೂರವಾಗಿದೆ. ಆದರೇನಂತೆ, ಅವರ ಪತ್ನಿ ಧನಶ್ರೀ ವರ್ಮಗೆ ಈಗ ವಿಶ್ವಕಪ್​ನ ಭಾಗವಾಗುವ ಅದೃಷ್ಟ ಒಲಿದಿದೆ!

ಮುಂಬರುವ ಏಕದಿನ ವಿಶ್ವಕಪ್​ ಟೂರ್ನಿಯ ಧ್ಯೇಯಗೀತೆಯನ್ನು ಐಸಿಸಿ ಬುಧವಾರ ಅನಾವರಣಗೊಳಿಸಿದೆ. "ದಿನ್​ ಜಶನ್​ ಬೋಲೆ' ಎಂಬ ಶುರುವಾಗುವ ಗೀತೆಯಲ್ಲಿ ಬಾಲಿವುಡ್​ ತಾರೆ ರಣವೀರ್​ ಸಿಂಗ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಣವೀರ್​ ಅವರೊಂದಿಗೆ ಕೋರಿಯೋಗ್ರಾರ್​ ಕೂಡ ಆಗಿರುವ ಧನಶ್ರೀ ವರ್ಮ ಹೆಜ್ಜೆ ಹಾಕಿ ಗಮನಸೆಳೆದಿದ್ದಾರೆ.

3 ನಿಮಿಷಗಳ ವಿಡಿಯೋ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 'ಒನ್​ಡೇ ಎಕ್ಸ್​ಪ್ರೆಸ್​' ಎಂಬ ರೈಲಿನ ಥೀಮ್​ನೊಂದಿಗೆ ಕ್ರಿಕೆಟ್​ ಪ್ರೇಮಿಗಳನ್ನು ವಿಶ್ವಕಪ್​ಗೆ ಆಹ್ವಾನಿಸುವ ಹಾಡು ಇದಾಗಿದೆ. ಪತಿ ಚಾಹಲ್​ಗೆ ವಿಶ್ವಕಪ್​ನಲ್ಲಿ ಆಡುವ ಅವಕಾಶ ಲಭಿಸದಿರುವ ನಡುವೆ ಧನಶ್ರೀ ವರ್ಮ ಹಾಡಿನಲ್ಲಿ ಭರ್ಜರಿ ಸ್ಟೆಪ್ಸ್​ ಹಾಕಿ ಭಾರತ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.