ಕ್ರೀಡೆ

ಆರ್​ಸಿಬಿಗೆ ಕೊಹ್ಲಿ ಮತ್ತು ಸಿಂಹ ನಡುವಿನ ವ್ಯತ್ಯಾಸ ತಿಳಿಸಿದ ಚಾಹಲ್​!

ಬೆಂಗಳೂರು: ವಿಶ್ವ ಸಿಂಹ ದಿನದ ಹಿನ್ನೆಲೆಯಲ್ಲಿ ಆರ್​ಸಿಬಿ ತಂಡದ ಟ್ವಿಟರ್​ ಖಾತೆಯಿಂದ ಸೋಮವಾರ ವಿಶೇಷವಾದ ಪೋಸ್ಟ್​ ಒಂದನ್ನು ಮಾಡಲಾಗಿತ್ತು. ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಮತ್ತು ಸಿಂಹವೊಂದರ ಚಿತ್ರವನ್ನು ಪ್ರಕಟಿಸಿ, ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿಸುವಂತೆ ಫ್ರಾಂಚೈಸಿ ತನ್ನ ಅಭಿಮಾನಿಗಳಿಗೆ ಕೇಳಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಆರ್​ಸಿಬಿ ತಂಡದ ಪ್ರಮುಖ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಅಷ್ಟೇ ತಮಾಷೆಯ ಉತ್ತರದೊಂದಿಗೆ ನಾಯಕನ ಕಾಲೆಳೆದಿದ್ದಾರೆ. ಹಾಗಾದರೆ ಚಾಹಲ್​ ನೀಡಿದ ಉತ್ತರವೇನು ಗೊತ್ತೇ?

ಕೊಹ್ಲಿ ಮತ್ತು ಸಿಂಹದ ನಡುವಿನ ವ್ಯತ್ಯಾಸ ತಿಳಿಸಿ, ನಮಗೆ ಯಾವ ವ್ಯತ್ಯಾಸವೂ ತಿಳಿಯುತ್ತಿಲ್ಲ ಎನ್ನುವ ಟ್ವೀಟ್​ನ ಮೂಲಕ ಆರ್​ಸಿಬಿ ಫ್ರಾಂಚೈಸಿ, ಇಬ್ಬರ ನಡುವೆ ಏನೂ ವ್ಯತ್ಯಾಸ ಇಲ್ಲ. ಕೊಹ್ಲಿ ಅವರು ಸಿಂಹದಂತೆ ಎಂದು ತಿಳಿಸಲು ಬಯಸಿತ್ತು. ಆದರೆ ಚಾಹಲ್​ ಇಬ್ಬರ ನಡುವಿನ ವ್ಯತ್ಯಾಸವೇನೆಂದು ಟ್ವಿಟರ್​ನಲ್ಲೇ ಉತ್ತರ ನೀಡಿದ್ದಾರೆ. 'ವ್ಯತ್ಯಾಸ ಇದೆ. ಮೊದಲ ಚಿತ್ರದಲ್ಲಿ ಬಟ್ಟೆ ಧರಿಸಿದ್ದರೆ, 2ನೇ ಚಿತ್ರದಲ್ಲಿ ಬಟ್ಟೆ ಧರಿಸಿಲ್ಲ' ಎಂದು ಟ್ವೀಟಿಸುವ ಮೂಲಕ ಚಾಹಲ್​ ಕಾಲೆಳೆದಿದ್ದಾರೆ.

ಚಾಹಲ್​ ಅವರ ಕಮೆಂಟ್​​​ ಆರ್​ಸಿಬಿ ಅಭಿಮಾನಿಗಳ ನಗುವಿಗೆ ಕಾರಣವಾಗಿದೆ. ಈಗಾಗಲೆ ವಿವಿಧ ಕಮೆಂಟ್​ಗಳ ಮೂಲಕ ಟ್ವಿಟರ್​ನಲ್ಲಿ ಗಮನಸೆಳೆಯುತ್ತಿದ್ದ ಚಾಹಲ್​ರ ಟ್ವೀಟ್​ 10 ಸಾವಿರಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಕೆಲ ಆರ್​ಸಿಬಿ ಅಭಿಮಾನಿಗಳು, 'ಒಬ್ಬ ಕ್ರಿಕೆಟ್​ನ ರಾಜ, ಮತ್ತೊರ್ವ ಕಾಡಿನ ರಾಜ' ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.