ಕ್ರೀಡೆ

ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಹೆಲ್ಮೆಟ್ ಜತೆಗೆ ನೆಕ್ ಗಾರ್ಡ್ ಧರಿಸುವುದು ಕಡ್ಡಾಯ

ಮೆಲ್ಬೋರ್ನ್: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಬೌನ್ಸರ್ ಎಸೆತದಲ್ಲಿ ತೀವ್ರಪೆಟ್ಟು ತಿಂದು ಕನ್‌ಕಷನ್‌ಗೆ ಒಳಗಾದ ಒಂದು ವಾರದ ಅಂತರದಲ್ಲಿ ಎಲ್ಲ ದೇಶೀಯ ಹಾಗೂ ಅಂತಾರಾಷ್ಟ್ರೀಯ ಆಟಗಾರರು ಬ್ಯಾಟಿಂಗ್ ಸಮಯದಲ್ಲಿ ಹೆಲ್ಮೆಟ್ ಜತೆಗೆ ನೆಕ್ ಗಾರ್ಡ್ ಧರಿಸುವುದನ್ನು ಕಡ್ಡಾಯಗೊಳಿಸಿ ‘ಕ್ರಿಕೆಟ್ ಆಸ್ಟ್ರೇಲಿಯಾ’ ಗುರುವಾರ ಸೂಚನೆ ನೀಡಿದೆ. ಅ. 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ಅನುಭವಿ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಸೇರಿ ಹಲವು ಆಸೀಸ್ ಆಟಗಾರರ ಮೇಲೆ ಈ ನಿಯಮ ಪರಿಣಾಮ ಬೀರಲಿದೆ. ಆಸೀಸ್ ಆಟಗಾರ ಫಿಲಿಪ್ ಹ್ಯೂಸ್ 2015ರಲ್ಲಿ ಬೌನ್ಸರ್ ಏಟಿಗೆ ದುರಂತ ಸಾವಿಗೀಡಾದ ಬಳಿಕ ಮಂಡಳಿಯ ನೋಂದಾಯಿತ ಆಟಗಾರರಿಗೆ ನೆಕ್ ಗಾರ್ಡ್‌ಗಳನ್ನು ಬಳಸುವಂತೆ ಕ್ರಿಕೆಟ್ ಆಸ್ಟ್ರೇಲಿಯಾ ಶಿಾರಸು ಮಾಡಿತ್ತು. ಆದರೆ ಈ ನಿರ್ಧಾರವನ್ನು ಸ್ಮಿತ್, ವಾರ್ನರ್ ವಿರೋಧಿಸಿದ್ದರು. ಸ್ಪಿನ್ನರ್‌ಗಳ ಎದುರು ಬ್ಯಾಟಿಂಗ್ ಅಥವಾ ಕ್ಲೋಸ್-ಇನ್ ಫೀಲ್ಡರ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.


ಪ್ರಸ್ತುತ ಉಸ್ಮಾನ್ ಖವಾಜ ಸಹ ನೆಕ್ ಗಾರ್ಡ್ ಧರಿಸುವುದಿಲ್ಲ. 2019ರ ಆಶಸ್ ಸರಣಿಯಲ್ಲಿ ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಪೆಟ್ಟು ತಿಂದಿದ್ದ ಸ್ಮಿತ್ ನೆಕ್ ಗಾರ್ಡ್ ಧರಿಸುವುದು ಕ್ಲಾಸ್ಟ್ರೋಫೋಬಿಕ್ (ಇಕ್ಕಟ್ಟು) ಎಂದು ಹೇಳಿದ್ದರು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾದ ಈ ನಿರ್ಧಾರದಿಂದ ಆಟಗಾರರು ತವರು ಮತ್ತು ವಿದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನೆಕ್ ಗಾರ್ಡ್ ಧರಿಸುವುದು ಕಡ್ಡಾಯವಾಗಿದೆ.