ಚೆನ್ನೈ: ಸರ್ವಾಂಗೀಣ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಜೈಪುರ ಪಿಂಕ್ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಆತಿಥೇಯ ತಮಿಳ್ ತಲೈವಾಸ್ ವಿರುದ್ಧ 25-24 ಅಂಕಗಳಿಂದ ರೋಚಕ ಗೆಲುವಿನ ದಾಖಲಿಸಿದೆ.
ಎಸ್ಡಿಎಟಿ ಮಲ್ಟಿ ಪರ್ಪಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೆ$ ಚರಣದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಜೈಪುರ ತಂಡ ಮೊದಲಾರ್ಧದಲ್ಲಿ 10-16ರಿಂದ ಹಿನ್ನಡೆ ಕಂಡಿತು. ಬಳಿಕ ದ್ವೀತಿಯಾರ್ಧದಲ್ಲಿ ರೈಡಿಂಗ್-ಟ್ಯಾಕಲಿಂಗ್ನಲ್ಲಿ ದಿಟ್ಟ ತಿರುಗೇಟು ನೀಡಿ ಕೊನೇಕ್ಷಣದಲ್ಲಿ ಗೆಲುವು ಒಲಿಸಿಕೊಂಡಿತು.
ಜೈಪುರ ಪರ ರೈಡಿಂಗ್ನಲ್ಲಿ ಅರ್ಜುನ್ ದೇಸ್ವಾಲ್ (7 ಅಂಕ) ಮತ್ತು ಟ್ಯಾಕಲಿಂಗ್ನಲ್ಲಿ ರೆಜಾ ಮಿರ್ಬರಿ (5), ನಾಯಕ ಸುನೀಲ್ ಕುಮಾರ್ (4) ಮಿಂಚಿದರು. ತವರಿನಲ್ಲಿ ಸತತ 2ನೇ ಸೋಲು ಕಂಡ ತಲೈವಾಸ್ ಪರ ರೈಡರ್ ಹಿಮಾಂಶು ನರ್ವಾಲ್ (8) ಹೋರಾಟ ವ್ಯರ್ಥವೆನಿಸಿತು.
ಗುಜರಾತ್ಗೆ ಜಯ: ರಾಕೇಶ್ (14) ಅವರ 13 ಯಶಸ್ವಿ ರೈಡಿಂಗ್ಗಳ ಬಲದಿಂದ ಗುಜರಾತ್ ಜೈಂಟ್ಸ್ ತಂಡ ದಿನದ 2ನೇ ಪಂದ್ಯದಲ್ಲಿ ಯುಪಿ ಯೋಧಾಸ್ ಎದುರು 38-30ರಿಂದ ಗೆಲುವು ದಾಖಲಿಸಿತು. ಮೊದಲಾರ್ಧದಲ್ಲಿ ಯುಪಿ 19-14ರಿಂದ ಮುನ್ನಡೆ ಸಾಧಿಸಿದ್ದರೆ, ದ್ವೀತಿಯಾರ್ಧದಲ್ಲಿ ಯುಪಿ ತಂಡವನ್ನು 2 ಬಾರಿ ಆಲೌಟ್ ಮಾಡುವ ಮೂಲಕ ಗುಜರಾತ್ ತಿರುಗೇಟು ನೀಡಿತು. ಯುಪಿ ಪರ ಸುರೇಂದರ್ ಗಿಲ್ (13) ಹೋರಾಟ ವ್ಯರ್ಥಗೊಂಡಿತು.