ಕ್ರೀಡೆ

ಇಂದು ಕೋಲ್ಕತ ನೈಟ್‌ರೈಡರ್ಸ್‌-ಚೆನ್ನೈ ಸೂಪರ್‌ಕಿಂಗ್ಸ್ ಕಾದಾಟ

ಅಬುಧಾಬಿ: ಅಸ್ಥಿರ ನಿರ್ವಹಣೆಯಿಂದ ಕಂಗೆಟ್ಟಿರುವ ಕೋಲ್ಕತ ನೈಟ್‌ರೈಡರ್ಸ್‌ ಮತ್ತು ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಐಪಿಎಲ್-13ರಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಎಂಎಸ್ ಧೋನಿ ಬಳಗ ಗೆಲುವಿನ ಲಯ ಕಾಯ್ದುಕೊಳ್ಳುವ ಉತ್ಸಾಹದಲ್ಲಿದ್ದರೆ, ದಿನೇಶ್ ಕಾರ್ತಿಕ್ ಪಡೆ ಸ್ಥಿರ ನಿರ್ವಹಣೆಯೊಂದಿಗೆ ಗೆಲುವಿನ ಹಾದಿಗೆ ಮರಳುವ ಹಂಬಲದಲ್ಲಿದೆ.

ಮೂರು ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ತೋರಿದ ಭರ್ಜರಿ ನಿರ್ವಹಣೆಯ ಬಳಿಕ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಇದರಿಂದಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಫೇವರಿಟ್ ತಂಡವಾಗಿಯೂ ಕಣಕ್ಕಿಳಿಯಲಿದೆ. ಧೋನಿ ಬಳಗದ 3 ಸೋಲಿನ ನೋವನ್ನು ಒಂದು ಗೆಲುವು ಮರೆಸಿದೆ. ಆದರೆ ಇದರಿಂದ ತಂಡ ಮೈಮರೆಯದಿದ್ದರೆ, ಗೆಲುವಿನ ಲಯದಲ್ಲಿ ಮುಂದುವರಿಯುವುದು ಕಷ್ಟವಲ್ಲ.

ಮತ್ತೊಂದೆಡೆ ಆಡಿದ 4 ಪಂದ್ಯಗಳಲ್ಲಿ 2 ಜಯ, 2 ಸೋಲಿನ ಮಿಶ್ರಲ ಕಂಡಿರುವ ಕೆಕೆಆರ್ ತಂಡಕ್ಕೆ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಅವರಿಂದ ಟೂರ್ನಿಯಲ್ಲಿ ಇದುವರೆಗೆ ಸ್ಫೋಟಕ ಬ್ಯಾಟಿಂಗ್‌ನ ಲಾಭ ಸಿಕ್ಕಿಲ್ಲ. ಒಂದು ವೇಳೆ ಈ ಬಾರಿ ರಸೆಲ್ ಅವರಿಂದ ಸ್ಫೋಟಕ ಆಟ ಬಂದರೆ ಸಿಎಸ್‌ಕೆ ತಂಡಕ್ಕೆ ಸಂಕಷ್ಟ ಎದುರಾಗಲಿದೆ. ಇನ್ನು ಸುನೀಲ್ ನಾರಾಯಣ್ ಬದಲಿಗೆ ಟಾಮ್ ಬ್ಯಾಂಟನ್ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದರೆ ಕೆಕೆಆರ್ ತಂಡದ ಉತ್ತಮ ಆರಂಭದ ಕೊರತೆಯೂ ನೀಗಬಹುದಾಗಿದೆ.

ಒತ್ತಡದಲ್ಲಿ ದಿನೇಶ್ ಕಾರ್ತಿಕ್

ಕೆಕೆಆರ್ ತಂಡದ ವೈಫಲ್ಯಗಳಿಗೆ ನಾಯಕ ದಿನೇಶ್ ಕಾರ್ತಿಕ್ ಹೆಚ್ಚಿನ ಟೀಕೆಗಳನ್ನು ಎದುರಿಸುತ್ತಿದ್ದಾರೆ. ರನ್‌ಬರವನ್ನು ಎದುರಿಸುತ್ತಿರುವ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಒತ್ತಡವೂ ಬರುತ್ತಿದೆ. ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ನಾಯಕ ಇವೊಯಿನ್ ಮಾರ್ಗನ್ ತಂಡದಲ್ಲಿದ್ದು, ಅವರಿಗೆ ನಾಯಕತ್ವ ವಹಿಸಬೇಕೆಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ. ಇದರ ನಡುವೆಯೂ ಕೆಕೆಆರ್ ಟೀಮ್ ಮ್ಯಾನೇಜ್‌ಮೆಂಟ್ ದಿನೇಶ್ ಕಾರ್ತಿಕ್ ಮೇಲೆ ನಂಬಿಕೆ ಇಟ್ಟಿದೆ. ಹೀಗಾಗಿ ತಂಡವನ್ನು ಗೆಲುವಿನ ಹಾದಿಗೆ ತರಬೇಕಾದ ಮಹತ್ವದ ಜವಾಬ್ದಾರಿ ಈಗ ಕಾರ್ತಿಕ್ ಹೆಗಲೇರಿದೆ. 4 ಪಂದ್ಯಗಳಲ್ಲಿ 37 ರನ್ ಗಳಿಸಿರುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕಾರ್ತಿಕ್, ಬ್ಯಾಟಿಂಗ್‌ನಲ್ಲೂ ಫಾರ್ಮ್ ಕಂಡುಕೊಳ್ಳಬೇಕಾಗಿದೆ.

ಟೀಮ್ ನ್ಯೂಸ್:

ಕೋಲ್ಕತ ನೈಟ್‌ರೈಡರ್ಸ್‌: ಸ್ಪಿನ್ ಬೌಲಿಂಗ್ ಆಲ್ರೌಂಡರ್ ಸುನೀಲ್ ನಾರಾಯಣ್ ಆರಂಭಿಕರಾಗಿ ವೈಲ್ಯ ಕಾಣುತ್ತಿದ್ದಾರೆ. ಹೀಗಾಗಿ, ಕೆವಿನ್ ಪೀಟರ್ಸೆನ್‌ಗೆ ಹೋಲಿಕೆ ಪಡೆದಿರುವ ಬಿಗ್ ಬಾಷ್ ಸೆನ್ಸೇಶನ್ ಟಾಮ್ ಬ್ಯಾಂಟನ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಸಂಭಾವ್ಯ ತಂಡ: ಶುಭಮಾನ್ ಗಿಲ್, ಟಾಮ್ ಬ್ಯಾಂಟನ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿ.ಕೀ), ಆಂಡ್ರೆ ರಸೆಲ್, ಇವೊಯಿನ್ ಮಾರ್ಗನ್, ರಾಹುಲ್ ತ್ರಿಪಾಠಿ, ಪ್ಯಾಟ್ ಕಮ್ಮಿನ್ಸ್/ಸುನೀಲ್ ನಾರಾಯಣ್, ಶಿವಂ ಮಾವಿ, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ.

ಕಳೆದ ಪಂದ್ಯ: ಡೆಲ್ಲಿ ವಿರುದ್ಧ 18 ರನ್ ಸೋಲು.

ಚೆನ್ನೈ ಸೂಪರ್‌ಕಿಂಗ್ಸ್: ಹೆಚ್ಚಿನ ಬದಲಾವಣೆ ಮಾಡಿಕೊಳ್ಳದೆ ಆಟಗಾರರ ಮೇಲೆ ನಂಬಿಕೆ ಇಡುವ ತಂಡವಿದು. ಕಳೆದ ಪಂದ್ಯದ ಭರ್ಜರಿ ಗೆಲುವಿನ ನಂತರವಂತೂ ತಂಡದಲ್ಲಿ ಬದಲಾವಣೆಯ ನಿರೀಕ್ಷೆ ಇಲ್ಲ.

ಸಂಭಾವ್ಯ ತಂಡ: ಶೇನ್ ವ್ಯಾಟ್ಸನ್, ಫಾಫ್​ ಡು ಪ್ಲೆಸಿಸ್, ಅಂಬಟಿ ರಾಯುಡು, ಕೇದಾರ್ ಜಾಧವ್, ಎಂಎಸ್ ಧೋನಿ (ವಿ.ಕೀ), ಸ್ಯಾಮ್ ಕರ‌್ರನ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ, ಪೀಯುಷ್ ಚಾವ್ಲ, ದೀಪಕ್ ಚಹರ್, ಶಾರ್ದೂಲ್ ಠಾಕೂರ್.

ಕಳೆದ ಪಂದ್ಯ: ಪಂಜಾಬ್ ವಿರುದ್ಧ 10 ವಿಕೆಟ್ ಗೆಲುವು.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.

ಮುಖಾಮುಖಿ: 20

ಸಿಎಸ್‌ಕೆ: 13

ಕೆಕೆಆರ್: 7