ಕ್ರೀಡೆ

ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಪಾಕ್​ ಕುಸಿತ, ಆಸೀಸ್​ ಮೇಲುಗೈ

ಮೆಲ್ಬೋರ್ನ್​: ನಾಯಕ ಹಾಗೂ ವೇಗಿ ಪ್ಯಾಟ್​ ಕಮ್ಮಿನ್ಸ್​ (37ಕ್ಕೆ 3) ಬಿಗಿ ಬೌಲಿಂಗ್​ ದಾಳಿಯ ನೆರವಿನಿಂದ ಆಸ್ಟ್ರೆಲಿಯಾ ತಂಡ ಎರಡನೇ ಹಾಗೂ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಪ್ರವಾಸಿ ಪಾಕಿಸ್ತಾನ ತಂಡದ ಪ್ರತಿರೋಧವನ್ನು ಬದಿಗೊತ್ತಿ ಮೇಲುಗೈ ಸಾಧಿಸಿದೆ.

ಎಂಸಿಜಿಯಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಬುಧವಾರ 3 ವಿಕೆಟ್​ಗೆ 187 ರನ್​ಗಳಿಂದ ಆಟ ಆರಂಭಿಸಿದ ಆಸ್ಟ್ರೆಲಿಯಾ, ಭೋಜನ ವಿರಾಮದ ವೇಳೆಗೆ 318 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ನಿಧಾನಗತಿಯ ಆಟದೊಂದಿಗೆ ಎಚ್ಚರಿಕೆಯ ಆರಂಭ ಪಡೆದ ಪಾಕ್​ ಒಂದು ಹಂತದಲ್ಲಿ 1 ವಿಕೆಟ್​ಗೆ 124 ರನ್​ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ಬಳಿಕ 46 ರನ್​ ಅಂತರದಲ್ಲಿ 5 ವಿಕೆಟ್​ ಕಳೆದುಕೊಂಡು ಕುಸಿಯಿತು. ದಿನದಂತ್ಯಕ್ಕೆ 6 ವಿಕೆಟ್​ಗೆ 194 ರನ್​ ಗಳಿಸಿರುವ ಪಾಕ್​, ಇನ್ನೂ 124 ರನ್​ ಹಿನ್ನಡೆಯಲ್ಲಿದೆ. ವಿಕೆಟ್​ ಕೀಪರ್​-ಬ್ಯಾಟರ್​ ಮೊಹಮದ್​ ರಿಜ್ವಾನ್​ (29) ಜತೆಗೆ ಆಮೀರ್​ ಜಮಾಲ್​ (2) ಕ್ರೀಸ್​ನಲ್ಲಿದ್ದಾರೆ.

ಪಂದ್ಯದ ಮೊದಲೆರಡು ದಿನದಾಟಕ್ಕೆ ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಹಾಜರಾಗಿದ್ದಾರೆ.

ಆಸ್ಟ್ರೆಲಿಯಾ: 96.5 ಓವರ್​ಗಳಲ್ಲಿ 318 (ಲಬುಶೇನ್​ 63, ಹೆಡ್​ 15, ಮಾರ್ಷ್​ 41, ಅಲೆಕ್ಸ್​ ಕ್ಯಾರಿ 41, ಕಮ್ಮಿನ್ಸ್​ 13, ಜಮಾಲ್​ 64ಕ್ಕೆ 3, ಹಸನ್​ ಅಲಿ 61ಕ್ಕೆ 2, ಮಿರ್​ ಹಂಜಾ 51ಕ್ಕೆ 2, ಅಫ್ರಿದಿ 85ಕ್ಕೆ 2), ಪಾಕಿಸ್ತಾನ: 55 ಓವರ್​ಗಳಲ್ಲಿ 6 ವಿಕೆಟ್​ಗೆ 194 (ಶಫೀಕ್​ 62, ಇಮಾಮ್​ 10, ಮಸೂದ್​ 54, ಬಾಬರ್​ 1, ಶಕೀಲ್​ 9, ರಿಜ್ವಾನ್​ 29*, ಕಮ್ಮಿನ್ಸ್​ 37ಕ್ಕೆ 3, ಲ್ಯಾನ್​ 48ಕ್ಕೆ 2, ಹ್ಯಾಸಲ್​ವುಡ್​ 29ಕ್ಕೆ 1).