ಅಬುಧಾಬಿ: ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದ ಮೊದಲ ಪಂದ್ಯದಲ್ಲೇ ಕೆಕೆಆರ್ ವಿರುದ್ಧ ಅನುಭವಿಸಿದ ಸೋಲು ನಮ್ಮ ತಂಡಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್‌ನಲ್ಲಿ 200ನೇ ಪಂದ್ಯವಾಡುತ್ತಿರುವ ಸಂಭ್ರಮದಲ್ಲಿದ್ದ ಕೊಹ್ಲಿ, ಆರ್‌ಸಿಬಿ ತಂಡ ಕೇವಲ 92 ರನ್‌ಗೆ ಆಲೌಟ್ ಆಗುವುದರೊಂದಿಗೆ ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳಲು ವಿಲರಾದರು. ಕೆಕೆಆರ್ ತಂಡ ಶುಭಮಾನ್ ಗಿಲ್ (48) ಮತ್ತು ವೆಂಕಟೇಶ್ ಅಯ್ಯರ್ (41*) ಜೋಡಿಯ ದಿಟ್ಟ ಆಟದಿಂದ 10 ಓವರ್‌ಗಳಲ್ಲೇ 1 ವಿಕೆಟ್‌ಗೆ 94 ರನ್ ಗಳಿಸಿ ಸುಲಭ ಜಯ ಸಾಧಿಸಿತು.
‘ನಾವು ಒಂದು ಹಂತದಲ್ಲಿ 1 ವಿಕೆಟ್‌ಗೆ 40 ರನ್ ಗಳಿಸಿ ಸುಸ್ಥಿತಿಯಲ್ಲಿದ್ದೆವು. ಆದರೆ ಬಳಿಕ ಸುಮಾರು 20 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡೆವು. ಅಲ್ಲಿಂದ ಮೇಲೇಳುವುದು ತುಸು ಕಷ್ಟಕರವಾಗಿತ್ತು. ಈ ದಿಢೀರ್ ಕುಸಿತ ನಮಗೊಂದು ಎಚ್ಚರಿಕೆಯ ಗಂಟೆಯಾಗಿದೆ. ಮುಂದೇನು ಮಾಡಬೇಕೆಂದು ನಮಗೀಗ ಸ್ಪಷ್ಟವಾಗಿದೆ. ಈ ಪಿಚ್‌ಗಳಲ್ಲಿ ಉತ್ತಮ ಜತೆಯಾಟ ಕಾಣುವುದು ಮುಖ್ಯವಾಗಿದೆ. 2ನೇ ಇನಿಂಗ್ಸ್ ವೇಳೆ ಅಷ್ಟು ಬೇಗನೆ ಇಬ್ಬನಿ ಸಮಸ್ಯೆ ಕಾಡಲಿದೆ ಎಂಬ ಬಗ್ಗೆಯೂ ನಮಗೆ ಗೊತ್ತಿರಲಿಲ್ಲ’ ಎಂದು ವಿರಾಟ್ ಕೊಹ್ಲಿ 9 ವಿಕೆಟ್ ಸೋಲಿನ ಬಳಿಕ ವಿಶ್ಲೇಷಿಸಿದರು.
‘ನಾವು 8 ಪಂದ್ಯಗಳಲ್ಲಿ 5ರಲ್ಲಿ ಜಯಿಸಿದ್ದೇವೆ. ಹೀಗಾಗಿ ಗಾಬರಿ ಬೀಳಬೇಕಾದ ಅಗತ್ಯವಿಲ್ಲ. ನಾವು ವೃತ್ತಿಪರವಾಗಿರಬೇಕಿದೆ. ನಮ್ಮ ಸಾಮರ್ಥ್ಯಗಳತ್ತ ಗಮನಹರಿಸಬೇಕಿದೆ. ಮೈದಾನದಲ್ಲಿ ನಮ್ಮ ಕಾರ್ಯತಂತ್ರಗಳನ್ನು ಸಮರ್ಥವಾಗಿ ಜಾರಿಗೊಳಿಸಬೇಕಿದೆ. ಮುಂದಿನ ಪಂದ್ಯದಲ್ಲಿ ತಂಡ ಪುಟಿದೆದ್ದು ಬಲಿಷ್ಠ ನಿರ್ವಹಣೆ ತೋರುವ ವಿಶ್ವಾಸವಿದೆ’ ಎಂದು ಕೊಹ್ಲಿ ಹೇಳಿದರು.
ಹಾಲಿ ಟೂರ್ನಿಯ ಬಳಿಕ ಆರ್‌ಸಿಬಿ ನಾಯಕತ್ವ ತ್ಯಜಿಸುವ ವಿರಾಟ್ ಕೊಹ್ಲಿ ನಿರ್ಧಾರ ತಂಡದ ನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನಮ್ಮ ತಂಡ ಇಲ್ಲಿನ ವಾತಾವರಣಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಲಿಲ್ಲ. ತಂಡ ಸಂಯೋಜನೆಯಲ್ಲೂ ಸಮಸ್ಯೆ ಇರಲಿಲ್ಲ. ಟಾಸ್ ನಿರ್ಧಾರದಲ್ಲಿ ಎಡವಿದೆವು ಎನಿಸುತ್ತದೆ. ನಾವು ಬೇಗನೆ ಪುಟಿದೇಳಲಿದ್ದೇವೆ ಎಂದು ಆರ್‌ಸಿಬಿ ಕೋಚ್ ಮೈಕ್ ಹೆಸ್ಸನ್ ಹೇಳಿದರು.
ಕೆಕೆಆರ್ ತಂಡ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಒಂದೂ ಸಿಕ್ಸರ್ ಬಿಟ್ಟುಕೊಡಲಿಲ್ಲ. ಅತ್ಯಧಿಕ ಎಸೆತ ಬಾಕಿ (60) ಉಳಿದ ಲೆಕ್ಕಾಚಾರದಲ್ಲಿ ಇದು ಕೆಕೆಆರ್ ತಂಡದ ಅತಿದೊಡ್ಡ ಗೆಲುವಾಗಿದೆ.