ಟೋಕಿಯೊ/ಮಾಂಟ್ರಿಯಲ್: ಮಾರಕ ಕೋವಿಡ್-19ರ ಭೀತಿಯಿಂದ ಜಾಗತಿಕ ಕ್ರೀಡಾಲೋಕ ತತ್ತರಿಸುತ್ತಿರುವ ಮಧ್ಯೆಯೇ ಮುಂಬರುವ ಟೋಕಿಯೊ ಒಲಿಂಪಿಕ್ಸ್ನಿಂದ ಕೆನಡ ತಂಡ ಹಿಂದೆ ಸರಿದಿದೆ. ಕೆನಡಿಯನ್ ಒಲಿಂಪಿಕ್ ಸಮಿತಿ (ಸಿಒಸಿ) ಹಾಗೂ ಕೆನಡಿಯನ್ ಪ್ಯಾರಾಲಿಂಪಿಕ್ (ಸಿಪಿಸಿ) ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿಯಿಂದಾಗಿ, ಮುನ್ನೆಚ್ಚರಿಕೆಯ ದೃಷ್ಟಿಯಿಂದ ಒಲಿಂಪಿಕ್ಸ್ ಮುಂದೂಡುವುದೇ ಒಲಿತು ಎಂದು ಸಿಒಸಿ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ಸಲಹೆ ನೀಡಿದ್ದು, ಮುಂದಿನ ವರ್ಷ ಒಲಿಂಪಿಕ್ಸ್ ಆಯೋಜಿಸಿದರೆ ಭಾಗವಹಿಸಲು ಸಿದ್ಧ ಎಂದು ತಿಳಿಸಿದೆ. ಸಿಒಸಿ ನಿರ್ಧಾರವನ್ನು ಕೆನಡ ರಾಷ್ಟ್ರೀಯ ಕ್ರೀಡಾ ಸಂಘಟನೆ ಹಾಗೂ ಅಥ್ಲೆಟಿಕ್ಸ್ ಆಯೋಗ ಹಾಗೂ ಕೆನಡ ಸರ್ಕಾರ ಸ್ವಾಗತಿಸಿವೆ. ಕೆನಡ ನಿರ್ಧಾರದಿಂದಾಗಿ ಜುಲೈ 24ರಂದು ಆರಂಭಗೊಳ್ಳಬೇಕಿರುವ ಜಾಗತಿಕ ಕ್ರೀಡಾಲೋಕದ ಬಹುನಿರೀಕ್ಷಿತ ಕ್ರೀಡಾಕೂಟಕ್ಕೆ ಭಾರಿ ಹಿನ್ನಡೆಯುಂಟಾಗಿದೆ.
2020ರ ಸಮ್ಮರ್ ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ ಗೇಮ್್ಸ ನಿಂದ ಕೆನಡ ಹೊರಗುಳಿಯಲಿದೆ ಎಂದು ಸಿಒಸಿ ಪ್ರಕಟಣೆಯಲ್ಲಿ ತಿಳಿಸಿದೆ. ಕೆನಡಿಯನ್ ಒಲಿಂಪಿಕ್ ಸಮಿತಿ, ಹೆಚ್ಚು ದಿನಗಳ ಕಾಲ ಕಾಯಲು ಸಾಧ್ಯವಿಲ್ಲ. ಕನಿಷ್ಠ ಒಂದು ವರ್ಷದ ಮಟ್ಟಿಗಾದರೂ ಮುಂದೂಡಿ ಎಂದು ಕೇಳಿಕೊಂಡಿದ್ದೇವೆ. ವಿಶ್ವ ಆರೋಗ್ಯ ದೃಷ್ಟಿಯಿಂದ ಮುಂದೂಡುವುದೇ ಒಲಿತು. ಇದು ಕೇವಲ ಕ್ರೀಡಾಪಟುಗಳ ಆರೋಗ್ಯದ ಪ್ರಶ್ನೆಯಲ್ಲ. ಸಾರ್ವಜನಿಕರ ಆರೋಗ್ಯವೂ ಮುಖ್ಯ ಎಂದು ಹೇಳಿದೆ. ಜತೆಗೆ ಒಲಿಂಪಿಕ್ಸ್ ಸಂಘಟಿಸಲು ಐಒಸಿ ಪಡುತ್ತಿರುವ ಪ್ರಯತ್ನವನ್ನು ಸಿಒಸಿ ಶ್ಲಾಘಿಸಿದೆ.
ಹಿಂದೆ ಸರಿಯುವ ಬಗ್ಗೆ ಆಸೀಸ್ ಪರೋಕ್ಷ ಸುಳಿವು: 2021ರಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ಗೆ ಸಿದ್ಧತೆ ನಡೆಸಿ ಎನ್ನುವ ಮೂಲಕ ಆಸ್ಟ್ರೇಲಿಯಾ, 2020ರಲ್ಲಿ ಒಲಿಂಪಿಕ್ಸ್ ನಡೆದರೆ ಭಾಗವಹಿಸುವುದಿಲ್ಲ ಎಂಬ ಪರೋಕ್ಷ ಸುಳಿವು ನೀಡಿದೆ. ಹಾಲಿ ಪರಿಸ್ಥಿತಿಯಲ್ಲಿ ಒಲಿಂಪಿಕ್ಸ್ ಕೂಟವನ್ನು ನಿಗದಿಯಂತೆ ನಡೆಸುವುದು ಖಂಡಿತವಾಗಿಯೂ ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯನ್ ಒಲಿಂಪಿಕ್ಸ್ ಸಂಸ್ಥೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೆನಡ ಒಲಿಂಪಿಕ್ಸ್ನಿಂದ ಅಧಿಕೃತವಾಗಿ ಹಿಂದೆ ಸರಿದ ಮೊದಲ ದೇಶವಾಗಿದ್ದು, ಸಾಂಕ್ರಾಮಿಕ ಪಿಡುಗಿನಿಂದ ಬಳಲುತ್ತಿರುವ ಇತರ ಕೆಲ ದೇಶಗಳೂ ಇದೇ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ. ಹಲವು ದೇಶಗಳ ಕ್ರೀಡಾಪಟುಗಳೂ ಒಲಿಂಪಿಕ್ಸ್ ಮುಂದೂಡಲು ಈಗಾಗಲೆ ಐಒಸಿಗೆ ಒತ್ತಡ ಹೇರುತ್ತಿದ್ದಾರೆ. ಈಗಾಗಲೆ ಎಲ್ಲ ಕ್ರೀಡೆಗಳಲ್ಲಿ ಒಲಿಂಪಿಕ್ಸ್ ಅರ್ಹತಾ ಕೂಟಗಳೇ ರದ್ದುಗೊಂಡಿವೆ. ಎಲ್ಲ ದೇಶಗಳಲ್ಲೂ ಕ್ರೀಡಾ ಚಟುವಟಿಕೆಗಳು ಬಹುತೇಕ ನಿಂತಿರುವುದರಿಂದ, ಕ್ರೀಡಾಪಟುಗಳ ಸಿದ್ಧತೆಗೂ ಭಾರಿ ಹಿನ್ನಡೆಯಾಗಿದೆ. ಮುಂದೂಡಿಕೆ ಅನಿವಾರ್ಯ ಆಗಬಹುದು
ನಿಗದಿಯಂತೆಯೇ ಒಲಿಂಪಿಕ್ಸ್ ಸಂಘಟಿಸಲು ಈಗಲೂ ಬದ್ಧವಾಗಿದ್ದೇವೆ. ಆದರೆ ಹಾಲಿ ಪರಿಸ್ಥಿತಿಯಲ್ಲಿ ಒಲಿಂಪಿಕ್ಸ್ ಮುಂದೂಡಿಕೆಯ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು ಎಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಸಂಸತ್ನಲ್ಲಿ ತಿಳಿಸಿದ್ದಾರೆ.
ಕೆನಡ ಒಲಿಂಪಿಕ್ಸ್ ನಿರ್ವಹಣೆ
ಕೆನಡ ಒಲಿಂಪಿಕ್ಸ್ನಲ್ಲಿ ಉತ್ತಮ ನಿರ್ವಹಣೆಯನ್ನೇ ತೋರಿದ ಇತಿಹಾಸ ಹೊಂದಿದ್ದು, 2016ರ ರಿಯೋ ಒಲಿಂಪಿಕ್ಸ್ನಲ್ಲಿ 4 ಚಿನ್ನ, 3 ಬೆಳ್ಳಿ, 15 ಕಂಚು ಸಹಿತ ಒಟ್ಟು 22 ಪದಕ ಗೆದ್ದು ಪದಕಪಟ್ಟಿಯಲ್ಲಿ 20ನೇ ಸ್ಥಾನ ಪಡೆದಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಒಟ್ಟಾರೆ 64 ಚಿನ್ನ, 102 ಬೆಳ್ಳಿ ಮತ್ತು 136 ಕಂಚಿನ ಸಹಿತ ಒಟ್ಟು 302 ಪದಕ ಗೆದ್ದ ಸಾಧನೆ ಮಾಡಿದೆ.
4 ವಾರದೊಳಗೆ ನಿರ್ಧಾರ
ಒಲಿಂಪಿಕ್ಸ್ ಮುಂದೂಡುವ ಬಗ್ಗೆಯೂ ಪರಿಶೀಲನೆಗಳು ನಡೆಯುತ್ತಿವೆ. ಮುಂದಿನ 4 ವಾರದೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಷ್ ಹೇಳಿದ್ದಾರೆ. ಮನುಷ್ಯನ ಜೀವ ಎಲ್ಲಕ್ಕಿಂತ ಮಹತ್ವದ್ದು. ಗೇಮ್್ಸ ಆಯೋಜನೆಗಿಂತಲೂ ಅದು ಅಮೂಲ್ಯವಾದುದು. ಒಲಿಂಪಿಕ್ಸ್ ರದ್ದುಗೊಳಿಸಿದರೆ ಯಾವ ಸಮಸ್ಯೆಯೂ ಬಗೆಹರಿಯದು. ಅದರಿಂದ ಯಾರಿಗೂ ನೆರವಾಗದು. ಹೀಗಾಗಿ ಗೇಮ್್ಸ ರದ್ದುಗೊಳಿಸುವುದು ನಮ್ಮ ಅಜೆಂಡಾದಲ್ಲಿ ಇಲ್ಲ ಎಂದು ಥಾಮಸ್ ಬಾಷ್ ತಿಳಿಸಿದ್ದಾರೆ.
ಒಂದು ತಿಂಗಳ ಕಾಲ ಕಾದು ನೋಡಲಿದೆ ಭಾರತ
ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಕನಿಷ್ಠ ಒಂದು ತಿಂಗಳ ಕಾಲ ಕಾದು ನೋಡುವುದಾಗಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ತಿಳಿಸಿದೆ. ‘ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ಆರೋಗ್ಯ ನಮ್ಮ ಪ್ರಮುಖ ಕಾಳಜಿಯಾಗಿದೆ. ನಾವು ಯಾವುದೇ ನಿರ್ಧಾರ ಕೈಗೊಂಡರೂ ಅದು ಕ್ರೀಡಾಪಟುಗಳ ಹಿತದೃಷ್ಟಿಯಿಂದಲೇ ಆಗಿರುತ್ತದೆ. ನಾವೀಗ ಪ್ರತಿದಿನದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ. ‘ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮತ್ತು ಕ್ರೀಡಾ ಸಚಿವಾಲಯದ ಜತೆ ರ್ಚಚಿಸಿದ ಬಳಿಕ ಮುಂದಿನ 4-5 ವಾರಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬಹುದು ಎಂದು ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ ಕೂಡ ತಿಳಿಸಿದ್ದಾರೆ. ಭಾರತದಲ್ಲಿ ಸದ್ಯ ಕರೊನಾ ಪ್ರಕರಣಗಳ ಸಂಖ್ಯೆ 400 ದಾಟಿದೆ.
ಕ್ರೀಡಾಪಟುಗಳ ಸಿದ್ಧತೆ ಮಾಹಿತಿ ಸಂಗ್ರಹ
ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿರುವ ಭಾರತದ ಎಲ್ಲ ಕ್ರೀಡಾಪಟುಗಳ ಆರೋಗ್ಯ ಮತ್ತು ಸಿದ್ಧತೆಯ ಮಾಹಿತಿಯನ್ನು ಮುಂದಿನ ಒಂದು ವಾರದೊಳಗೆ ಎಲ್ಲ ಕ್ರೀಡಾ ಸಂಸ್ಥೆಗಳಿಂದ ಸಂಗ್ರಹಿಸಲಾಗುವುದು ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ತಿಳಿಸಿದ್ದಾರೆ. ಇದುವರೆಗೆ ಭಾರತದ 70ಕ್ಕೂ ಅಧಿಕ ಕ್ರೀಡಾಪಟುಗಳು ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದಾರೆ. ‘ಕ್ರೀಡಾ ಸಚಿವಾಲಯ, ಸಾಯ್, ಐಒಸಿ, ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಜತೆಗೆ ನಿರಂತರ ಸಂಪರ್ಕದಲ್ಲಿರುವೆ’ ಎಂದು ಬಾತ್ರಾ ತಿಳಿಸಿದ್ದಾರೆ. ಐಒಸಿ ಅಧ್ಯಕ್ಷ ಥಾಮಸ್ ಬಾಷ್ ಮಾರ್ಚ್ 19ರಂದು ಎಲ್ಲ ರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಗಳ ಜತೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ರ್ಚಚಿಸಿದ್ದಾರೆ ಎಂದೂ ಬಾತ್ರಾ ತಿಳಿಸಿದ್ದಾರೆ.
ಮುಂದಿನ ವರ್ಷಕ್ಕೆ ಮುಂದೂಡಿಕೆ ಸುಲಭವಲ್ಲ
2021ರ ಕ್ರೀಡಾ ಕ್ಯಾಲೆಂಡರ್ ಈಗಾಗಲೆ ತುಂಬಿರುವುದರಿಂದ ಒಲಿಂಪಿಕ್ಸ್ ಮುಂದೂಡುವುದು ಸುಲಭದ ಮಾತಲ್ಲ ಎಂದು ಐಒಸಿ ಹೇಳಿದೆ. ಜತೆಗೆ, ಪ್ರತಿ 4 ವರ್ಷಕ್ಕೊಮ್ಮೆ ನಡೆಯುವ ಒಲಿಂಪಿಕ್ಸ್ ಮುಂದೂಡುವುದಕ್ಕೆ ಇರುವ ಅಡಚಣೆಗಳ ಬಗ್ಗೆ ವಿವರಿಸಿದೆ. 2021ರ ಆಗಸ್ಟ್ನಲ್ಲಿ ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್ ಅಮೆರಿಕದಲ್ಲಿ ನಿಗದಿಯಾಗಿದೆ. ಅಥ್ಲೀಟ್ಗಳಿಗೆ ಇದು ಒಲಿಂಪಿಕ್ಸ್ಗಿಂತ ಆರ್ಥಿಕವಾಗಿ ಹೆಚ್ಚು ಲಾಭದಾಯಕವಾದ ಕೂಟವಾಗಿದೆ. ಹೀಗಾಗಿ 2020ರ ಜುಲೈ 24ರಿಂದ ಆಗಸ್ಟ್ 9ರವರೆಗೆ ನಿಗದಿಯಾಗಿರುವ ಟೋಕಿಯೊ ಒಲಿಂಪಿಕ್ಸ್ ಅನ್ನು ಮುಂದಿನ ವರ್ಷ ಇದೇ ಸಮಯದಲ್ಲಿ ನಡೆಸುತ್ತೇವೆ ಎನ್ನಲಾಗದು. 2021ರ ಜೂನ್-ಜುಲೈಗೆ ಯುರೋಕಪ್ ಈಗಾಗಲೆ ಮುಂದೂಡಿಕೆಯಾಗಿದೆ.