ಸೆಂಚುರಿಯನ್: ಏಕದಿನ ವಿಶ್ವಕಪ್ ಗೆದ್ದ ಕಪಿಲ್ ದೇವ್, ಎಂಎಸ್ ಧೋನಿ ಸಾಲಿಗೆ ಸೇರುವ ಅವಕಾಶದಿಂದ ಸ್ವಲ್ಪದರಲ್ಲಿ ವಂಚಿತರಾದ ರೋಹಿತ್ ಶರ್ಮ, ದ. ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಭಾರತೀಯ ನಾಯಕರೆಂಬ ಇತಿಹಾಸ ಬರೆಯುವ ಹಂಬಲದಲ್ಲಿದ್ದಾರೆ. ಅಜರುದ್ದೀನ್ (1992), ಸಚಿನ್ ತೆಂಡುಲ್ಕರ್ (1996), ಸೌರವ್ ಗಂಗೂಲಿ (2001), ರಾಹುಲ್ ದ್ರಾವಿಡ್ (2006-07), ಎಂಎಸ್ ಧೋನಿ (2010-11), ವಿರಾಟ್ ಕೊಹ್ಲಿ (2018-19, 2021-22) ನಾಯಕತ್ವದಲ್ಲಿ ಸಾಧ್ಯವಾಗದ್ದನ್ನು ರೋಹಿತ್ ಶರ್ಮ ಸಾರಥ್ಯದಲ್ಲಿ ಸಾಧಿಸುವ ಛಲ ಭಾರತ ತಂಡದ್ದಾಗಿದೆ.
ಹರಿಣಗಳ ನಾಡಿನಲ್ಲಿ ಭಾರತ ಇದುವರೆಗೆ ಆಡಿರುವ 8 ಟೆಸ್ಟ್ ಸರಣಿಗಳಲ್ಲಿ 7ರಲ್ಲಿ ಸೋತಿದ್ದು, 2010-11ರಲ್ಲಿ ಏಕೈಕ ಬಾರಿ ಎಂಎಸ್ ಧೋನಿ ಸಾರಥ್ಯದಲ್ಲಿ ಆಡಿದಾಗ 1-1ರಿಂದ ಸರಣಿ ಸಮಬಲ ಸಾಧಿಸಿದ್ದೇ ಇದುವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ.
ವಿಶ್ವಕಪ್ ಫೈನಲ್ ಸೋಲಿನ ನೋವಿಗೆ ದ. ಆಫ್ರಿಕಾದಲ್ಲಿನ ಟೆಸ್ಟ್ ಸರಣಿ ಗೆಲುವು ಮುಲಾಮು ಆಗಬಹುದೇ ಎಂಬುದು ಗೊತ್ತಿಲ್ಲ. ಯಾಕೆಂದರೆ ವಿಶ್ವಕಪ್ ಯಾವತ್ತಿದ್ದರೂ ವಿಶ್ವಕಪ್. ಆದರೆ ದ. ಆಫ್ರಿಕಾದಲ್ಲಿ ಆಡುವುದು ಯಾವಾಗಲೂ ಸವಾಲು. ಇದು ಬ್ಯಾಟಿಂಗ್ಗೆ ಅತ್ಯಂತ ಕಠಿಣವಾದ ತಾಣ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಪಂದ್ಯಕ್ಕೆ ಮುನ್ನಾದಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು.