ಕ್ರೀಡೆ

ಕೊಹ್ಲಿ, ಪಾಟಿದಾರ್​ ಜತೆಗೆ ಆಸ್ಟ್ರೇಲಿಯಾದ ಈ ಆಟಗಾರನನ್ನು ರಿಟೇನ್​ ಮಾಡಲು ಮುಂದಾಗಿತ್ತು RCB; ಆದರೆ...

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್​ಗೆ ಸಂಬಂಧಿಸಿದಂತೆ ಈಗಾಗಲೇ ತಂಡಗಳು ರಿಟೇನ್​ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೂವರು ಆಟಗಾರರನನ್ನು ಉಳಿಸಿಕೊಳ್ಳುವ ಮೂಲಕ ಆರ್​ಸಿಬಿ (RCB) ಎಲ್ಲರ ಗಮನ ಸೆಳೆಯುತ್ತಿದೆ. ಮೆಗಾ ಹರಾಜಿಗೆ ಸಂಬಂಧಿಸಿದಂತೆ ಆರ್​ಸಿಬಿ (RCB) 83 ಕೋಟಿ ರೂಗಳನ್ನು ಪರ್ಸ್​ನಲ್ಲಿ ಉಳಿಸಿಕೊಂಡಿದ್ದು, ಹರಾಜಿನಲ್ಲಿ ಈ ಬಾರಿ ಆರ್​ಸಿಬಿ (RCB) ಸದ್ದು ಮಾಡುವುದು ಗ್ಯಾರಂಟಿಯಾಗಿದೆ. ಆದರೆ, ರಿಟೇನ್​ಗೆ ಸಂಬಂಧಿಸಿದಂತೆ ಆರ್​ಸಿಬಿ (RCB) ಓರ್ವ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಲು ಮುಂದಾಗಿತ್ತು. ಆದರೆ, ಆತನನ್ನು ರಿಟೇನ್​ ಮಾಡದಿರುವ ಕುರಿತು ಫ್ರಾಂಚೈಸಿ ಕಾರಣವನ್ನು ನೀಡಿದ್ದು, ಇದು ಉತ್ತಮ ನಿರ್ಧಾರ ಎಂದು ಕ್ರೀಡಾ ವಲಯದಲ್ಲಿ ಶ್ಲಾಘಿಸಲಾಗುತ್ತಿದೆ.

ರಿಟೇನ್​ಗೆ ಸಂಬಂಧಿಸಿದಂತೆ ಎಲ್ಲರ ನಿರೀಕ್ಷೆಯನ್ನು ಉಲ್ಟಾಪಲ್ಟಾ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.ಅದರಂತೆ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್​ರನ್ನು ಉಳಿಸಿಕೊಳ್ಳಲಾಗಿದೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾ ತಂಡದ ಸ್ಟಾರ್​ ಆಲ್ರೌಂಡರ್​ ಕ್ಯಾಮರೂನ್​ ಗ್ರೀನ್​ರನ್ನು (Cameron Green) ತಂಡದಲ್ಲಿ ಉಳಿಸಿಕೊಳ್ಳಲಾಗುತ್ತೆ ಎಂದು ಹೇಳಲಾಗಿತ್ತಾದರು ಈ ಬಗ್ಗೆ ತಂಡದ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ.

ಕ್ಯಾಮರೂನ್​ ಗ್ರೀನ್ (Cameron Green) ಅವರನ್ನು ರಿಟೇನ್​ ಮಾಡದಿರುವ ಕುರಿತು ಮಾತನಾಡಿರುವ ಆರ್​ಸಿಬಿ (RCB) ಫ್ರಾಂಚೈಸಿಯ ನಿರ್ದೇಶಕ ಬೊಬಾಟ್​ ನಾವು ಗ್ರೀನ್ ಅವರನ್ನು ರಿಟೇನ್ ಮಾಡಿಕೊಳ್ಳಲು ಬಯಸಿದ್ದವು. ಆದರೆ ಇಂಜುರಿ ಕಾರಣದಿಂದಾಗಿ ಗ್ರೀನ್ ಅವರೇ ಮುಂದಿನ ಆವೃತ್ತಿ ಆಡದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಅವರನ್ನು ರಿಟೇನ್ ಮಾಡಲಿಲ್ಲ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದ ಗ್ರೀನ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮುಂಬರುವ ಬಾರ್ಡರ್​-ಗವಾಸ್ಕರ್​ ಟ್ರೋಫಿಯಿಂದ ಗ್ರೀನ್​ ಹೊರಬಿದ್ದಿದ್ದು, ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಮತ್ತು ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿಯಲಿದ್ದಾರೆ.

ಇನ್ನೂ ರಿಟೇನ್​ ವಿಚಾರಕ್ಕೆ ಬರುವುದಾದರೆ ಆರ್​ಸಿಬಿ (RCB) ಫ್ರಾಂಚೈಸಿಯೂ ತನ್ನ ಮೊದಲ ಆಯ್ಕೆಯಾಗಿ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರನ್ನು ಆಯ್ಕೆ ಮಾಡಿದ್ದು, ಎರಡನೇ ಆಯ್ಕೆಯಾಗಿ ರಜತ್​ ಪಾಟಿದಾರ್​ಗೆ ಮಣೆ ಹಾಕಲಾಗಿದೆ. ಮೂರನೇ ಆಯ್ಕೆಯಾಗಿ ತಂಡ ವೇಗಿ ಯಶ್​ ದಯಾಳ್​ ಅವರನ್ನು ಆಯ್ಕೆ ಮಾಡಿದ್ದು, ಇವರಿಗೆ ಕ್ರಮವಾಗಿ 21, 11 ಹಾಗೂ 5 ಕೋಟಿ ರೂ. ಹಣವನ್ನು ಫ್ರಾಂಚೈಸಿ ವ್ಯಯಿಸಲಿದೆ.