ಗಯಾನಾ: ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್ (23ಕ್ಕೆ 3) ಮತ್ತು ಕುಲದೀಪ್ ಯಾದವ್ (19ಕ್ಕೆ 3) ಕಡಿವಾಣ ಹೇರುವ ಮೂಲಕ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಿದರು. ಅತ್ತ ಇಂಗ್ಲೆಂಡ್ ತಂಡ ಮೂವರು ಸ್ಪಿನ್ನರ್ಗಳನ್ನು ಮಾತ್ರ ಹೊಂದಿದ್ದರೂ, ಇಬ್ಬರಿಗೆ ಮಾತ್ರ ಬೌಲಿಂಗ್ ನೀಡಿತು ಮತ್ತು ಅವರು ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ಜಾರ್ಜ್ಟೌನ್ನ ಸ್ಪಿನ್ ಸ್ನೇಹಿ ಪಿಚ್ನಲ್ಲಿ ತಂಡದ 3ನೇ ಸ್ಪಿನ್ನರ್ ಆಗಿದ್ದ ಮೊಯಿನ್ ಅಲಿಗೆ ಬೌಲಿಂಗ್ ನೀಡದ ಎಡವಟ್ಟಿನ ಬಗ್ಗೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ 68 ರನ್ಗಳಿಂದ ಸೋಲುಂಡ ಬಳಿಕ ವಿಷಾದಿಸಿದರು. ಮೊಯಿನ್ ಅಲಿಗೆ ಬೌಲಿಂಗ್ ನೀಡದ್ದು ತಮ್ಮ ಕಾರ್ಯತಂತ್ರದ ಪ್ರಮಾದವಾಗಿತ್ತು ಎಂದೂ ಬಟ್ಲರ್ ಒಪ್ಪಿಕೊಂಡಿದ್ದಾರೆ.
ಭಾರತದ 172 ರನ್ ಸವಾಲಿಗೆ ಪ್ರತಿಯಾಗಿ ಇಂಗ್ಲೆಂಡ್, 16.4 ಓವರ್ಗಳಲ್ಲೇ 103 ರನ್ಗಳಿಗೆ ಸರ್ವಪತನ ಕಂಡಿತು. ಇನಿಂಗ್ಸ್ನ 4ನೇ ಓವರ್ನ ಮೊದಲ ಎಸೆತದಲ್ಲೇ ಬಟ್ಲರ್, ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದ ಬಳಿಕ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡಿತು. ಪವರ್ಪ್ಲೇನಲ್ಲೇ 3 ವಿಕೆಟ್ ಕಳೆದುಕೊಂಡಿತು. ನಂತರ 11ನೇ ಓವರ್ ವೇಳೆ ತಂಡದ ಎಲ್ಲ 6 ಬ್ಯಾಟರ್ಗಳು ಡಗೌಟ್ ಸೇರುವುದರೊಂದಿಗೆ ಆಂಗ್ಲರ ಸೋಲು ಖಚಿತಗೊಂಡಿತು.
ಭಾರತ ತಂಡ ನಮ್ಮನ್ನು ಎಲ್ಲ ವಿಭಾಗಗಳಲ್ಲೂ ಹಿಮ್ಮೆಟ್ಟಿಸಿತು. ಭಾರತ ಈ ಗೆಲುವಿಗೆ ಅರ್ಹ ತಂಡವಾಗಿದೆ. ಭಾರತವನ್ನು ನಾವು 145-150 ರನ್ಗಳಿಗೆ ನಿಯಂತ್ರಿಸಬೇಕಾಗಿತ್ತು. ಆದರೆ ಅವರು ಅದಕ್ಕಿಂತ ದೊಡ್ಡ ಮೊತ್ತ ಗಳಿಸಿದರು. ಅದನ್ನು ಚೇಸಿಂಗ್ ಮಾಡುವುದು ನಮಗೆ ಕಠಿಣವಾಗಿತ್ತು ಎಂದು ಬಟ್ಲರ್ ವಿವರಿಸಿದರು. ಈ ಜಯದೊಂದಿಗೆ ಭಾರತ ತಂಡ 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು. ಆಗ ಇಂಗ್ಲೆಂಡ್ 10 ವಿಕೆಟ್ಗಳಿಂದ ಗೆದ್ದಿದ್ದರೆ, ಭಾರತ ಈ ಬಾರಿ ಆಂಗ್ಲರ ಎಲ್ಲ 10 ವಿಕೆಟ್ ಕಬಳಿಸಿ ಲೆಕ್ಕ ಚುಕ್ತಾ ಮಾಡಿತು.