ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ 904 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಮೂಲಕ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಸರ್ವಾಧಿಕ ಅಂಕ ಕಲೆಹಾಕಿದ ಆರ್. ಅಶ್ವಿನ್ (904) ಅವರ ಭಾರತೀಯ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕಳೆದ ಬ್ರಿಸ್ಬೇನ್ ಟೆಸ್ಟ್ನಲ್ಲಿ 94 ರನ್ಗಳಿಗೆ 9 ವಿಕೆಟ್ ಕಬಳಿಸಿದ್ದ ಬುಮ್ರಾ 14 ರೇಟಿಂಗ್ ಪಾಯಿಂಟ್ಗಳನ್ನು ಕಲೆಹಾಕಿದರು. ಇದರೊಂದಿಗೆ ಅವರ ಒಟ್ಟಾರೆ ಅಂಕ ಗಳಿಕೆ 904ಕ್ಕೆ ಏರಿತು. ಇದೀಗ ಮೆಲ್ಬೋರ್ನ್ ಟೆಸ್ಟ್ನಲ್ಲಿ ಈ ಅಂಕ ಗಳಿಕೆಯನ್ನು ಹಿಂದಿಕ್ಕುವ ಅವಕಾಶವೂ ಬುಮ್ರಾ ಮುಂದಿದೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 2007ರಲ್ಲಿ 920 ರೇಟಿಂಗ್ ಅಂಕ ಕಲೆಹಾಕಿರುವುದು ಐಸಿಸಿ ರ‍್ಯಾಂಕಿಂಗ್‌ನಲ್ಲಿ ಬೌಲರ್ ಒಬ್ಬನ ಸರ್ವಾಧಿಕ ಅಂಕ ಗಳಿಕೆಯಾಗಿದೆ.
ದ. ಆಫ್ರಿಕಾದ ಕಗಿಸೊ ರಬಾಡ (856) ಮತ್ತು ಆಸ್ಟ್ರೆಲಿಯಾದ ಜೋಶ್ ಹ್ಯಾಸಲ್ವುಡ್ (852) ಬುಮ್ರಾ ನಂತರದಲ್ಲಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.
ಭಾರತೀಯ ಬ್ಯಾಟರ್ಗಳ ಕುಸಿತ
ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಭಾರತದ ಬಹುತೇಕ ಎಲ್ಲ ಅಗ್ರ ಬ್ಯಾಟರ್ಗಳು ಕುಸಿತ ಕಂಡಿದ್ದಾರೆ. ರ‍್ಯಾಂಕಿಂಗ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಟರ್ ಆಗಿರುವ ಯಶಸ್ವಿ ಜೈಸ್ವಾಲ್ 1 ಸ್ಥಾನ ಕುಸಿದು 5ನೇ ಸ್ಥಾನಕ್ಕಿಳಿದಿದ್ದಾರೆ. ರಿಷಭ್ ಪಂತ್ 2 ಸ್ಥಾನ ಕುಸಿತದೊಂದಿಗೆ ಅಗ್ರ 10ರಿಂದ ಹೊರಬಿದ್ದು, 11ನೇ ಸ್ಥಾನಕ್ಕಿಳಿದಿದ್ದಾರೆ. ಶುಭಮಾನ್ ಗಿಲ್ 4 ಸ್ಥಾನ ಕುಸಿದು 20ನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 1 ಸ್ಥಾನ ಕುಸಿತದೊಂದಿಗೆ ಅಗ್ರ 20ರಿಂದ ಹೊರಬಿದ್ದು, 21ನೇ ಸ್ಥಾನಕ್ಕಿಳಿದಿದ್ದಾರೆ. ನಾಯಕ ರೋಹಿತ್ ಶರ್ಮ 5 ಸ್ಥಾನ ಕುಸಿದು, 35ನೇ ಸ್ಥಾನಕ್ಕಿಳಿದಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಮಾತ್ರ 10 ಸ್ಥಾನ ಪ್ರಗತಿ ಕಂಡಿದ್ದು, 40ನೇ ಸ್ಥಾನಕ್ಕೇರಿದ್ದಾರೆ.