ನವದೆಹಲಿ: ಟೀಮ್ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿದ್ದು ಗೊತ್ತೇ ಇದೆ. ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಆ ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ನಾವೆಲ್ಲ ಈ ಚಾಂಪಿಯನ್ ಆಟಗಾರರನ್ನು ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ನೋಡಬಹುದು. ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಬಳಿಕ ಈ ಇಬ್ಬರು ಸ್ಟಾರ್ ಆಟಗಾರರು ಏಕದಿನ ಪಂದ್ಯಗಳಿಂದಲೂ ನಿವೃತ್ತಿಯಾಗುವ ಸೂಚನೆಗಳಿವೆ. ಆ ಬಳಿಕ ಟೆಸ್ಟ್‌ನಲ್ಲಿ ಮಾತ್ರ ಆಡುತ್ತಾ ಇನ್ನೂ ಕೆಲವು ವರ್ಷಗಳ ಕಾಲ ಯುವ ಆಟಗಾರರನ್ನು ಬೆಂಬಲಿಸುವ ಸಾಧ್ಯತೆಗಳಿವೆ.
ಈಗ ಉದ್ಭವವಾಗಿರುವ ಪ್ರಶ್ನೆ ಏನೆಂದರೆ, ಕೊಹ್ಲಿಯ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದು. ರನ್ ಮೆಶಿನ್ ಕೊಹ್ಲಿಯಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾರು ಪ್ರಾಬಲ್ಯ ಸಾಧಿಸುತ್ತಾರೆ ಅನ್ನೋ ನಮ್ಮ ಪ್ರಶ್ನೆಗೆ ವೆಸ್ಟ್ ಇಂಡೀಸ್ನ ದಿಗ್ಗಜ ಬ್ರಿಯಾನ್ ಲಾರಾ ಉತ್ತರ ನೀಡಿದ್ದಾರೆ.
ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕೊಹ್ಲಿಗೆ ಸರಿಯಾದ ಉತ್ತರಾಧಿಕಾರಿ ಎಂದು ಲಾರಾ ಹೇಳಿದ್ದಾರೆ. ಮುಂದಿನ ದಶಕದಲ್ಲಿ ವಿರಾಟ್‌ನಂತೆ ವಿಶ್ವ ಕ್ರಿಕೆಟ್‌ನ್ನು ಆಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಗಿಲ್ ಹೊಡೆತದಿಂದ ಎಲ್ಲ ದಾಖಲೆಗಳು ಮುರಿಯುತ್ತವೆ ಎಂದು ಲಾರಾ ಭರವಸೆ ವ್ಯಕ್ತಪಡಿಸಿದ್ದಾರೆ. ಶುಭಮನ್ ಗಿಲ್ ಪ್ರಸ್ತುತ ಪೀಳಿಗೆಯ ಅತ್ಯಂತ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರ ಬ್ಯಾಟಿಂಗ್ ಕೌಶಲ್ಯ ಅದ್ಭುತವಾಗಿದೆ. ಮುಂದಿನ ಕೆಲವು ವರ್ಷಗಳ ಕಾಲ ಅವರು ವಿಶ್ವ ಕ್ರಿಕೆಟ್ ಅನ್ನು ಆಳಲಿದ್ದಾರೆ. ಅವರ ಮೇಲೆ ನನಗೆ ಅಪಾರ ನಂಬಿಕೆ ಇದೆ. ಅವರು ಕ್ರಿಕೆಟ್‌ನಲ್ಲಿ ಹಲವು ದೊಡ್ಡ ದಾಖಲೆಗಳನ್ನು ಮುರಿಯುವುದು ಖಚಿತ' ಎಂದು ಲಾರಾ ಹೇಳಿದ್ದಾರೆ.
ಶುಭ್‌ಮನ್ ಜೊತೆಗೆ, ಲಾರಾ ಮತ್ತೊಬ್ಬ ಭಾರತೀಯ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಹೊಗಳಿದರು. ಗಿಲ್-ಜೈಸ್ವಾಲ್ ಮಾತ್ರ ತಮ್ಮ 400 ರನ್ ದಾಖಲೆಯನ್ನು ಮುರಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಲಾರಾ ಹೇಳಿದರು. ಗಿಲ್-ಜೈಸ್ವಾಲ್ಗೆ ಸಮಯ ಸಿಕ್ಕರೆ ಮತ್ತು ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿದರೆ, ಅವರು ನನ್ನ ದಾಖಲೆಯನ್ನು ಮುರಿಯಬಹುದು. ಭಾರತ ತಂಡವು ಗಿಲ್-ಜೈಸ್ವಾಲ್ ರೂಪದಲ್ಲಿ ಇಬ್ಬರು ಉತ್ತಮ ಆಟಗಾರರನ್ನು ಹೊಂದಿದೆ. ನನ್ನ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಅವರಲ್ಲಿದೆ ಎಂದು ಲಾರಾ ಹೇಳಿದ್ದಾರೆ. (ಏಜೆನ್ಸೀಸ್)