ನವದೆಹಲಿ: ಈವರೆಗೆ ನಾಲ್ವರು ಆಟಗಾರರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಕರೊನಾ ಎರಡನೇ ಅಲೆಯ ಗಂಭೀರತೆ ಅರಿತು ಪ್ರಸಕ್ತ ಐಪಿಎಲ್ ಟೂರ್ನಿಯನ್ನು ರದ್ದು ಮಾಡಿರುವುದಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಂಗಳವಾರ ತಿಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾ ಮತ್ತು ಸನ್ ರೈಸರ್ಸ್ ಹೈದರಾಬಾದ್ನ ವೃದ್ಧಿಮಾನ್ ಸಹಾಗೆ ಕರೊನಾ ಸೋಂಕು ದೃಢಪಟ್ಟಿದೆ. ವೃದ್ಧಿಮನ್ ಪರೀಕ್ಷೆಯ ನಂತರ ನಿನ್ನೆಯಿಂದಲೇ ಪ್ರತ್ಯೇಕವಾಗಿದ್ದಾರೆ.
ಸೋಮವಾರವಷ್ಟೇ ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ಗೆ ಕರೊನಾ ದೃಢಪಟ್ಟಿದೆ. ಬಯೋಬಬಲ್ ಒಳಗೆ ಕರೊನಾ ಪಾಸಿಟಿವ್ ಆದ ಮೊದಲ ಆಟಗಾರರು ಎನಿಸಿಕೊಂಡಿದ್ದು, ಇದೇ ಕಾರಣದಿಂದ ನಿನ್ನೆ ನಡೆಯಬೇಕಿದ್ದ ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ರದ್ದು ಪಡಿಸಲಾಯಿತು.
ಎಲ್ಲವೂ ಸರಿಯಿದ್ದರೆ ಇಂದು ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ, ಕರೊನಾ ಒಂದು ಕ್ಯಾಂಪ್ನಿಂದ ಮತ್ತೊಂದು ಕ್ಯಾಂಪ್ಗೆ ಸ್ಥಳಾಂತರ ಆಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಐಪಿಎಲ್ ರದ್ದು ಮಾಡಲಾಗಿದೆ.