ಕ್ರೀಡೆ

ಬಾಕ್ಸರ್​ ಮೇರಿ ಕೋಮ್​ 20 ವರ್ಷಗಳ ದಾಂಪತ್ಯದಲ್ಲಿ ಬಿರುಕು! ಪತಿ ಚುನಾವಣೆಯಲ್ಲಿ ಸೋತ ನಂತರ ವಿರಸ!

ನವದೆಹಲಿ: ಒಲಿಂಪಿಕ್ಸ್​ ಪದಕ ವಿಜೇತೆ ಹಾಗೂ 5 ಬಾರಿಯ ವಿಶ್ವ ಚಾಂಪಿಯನ್​ ಬಾಕ್ಸರ್​ ಮೇರಿ ಕೋಮ್​ ಅವರ 20 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಪತಿ ಕರುಂಗ್​ ಒಂಕೋಲರ್​ (ಒನ್ಲರ್​) ಅವರಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಒನ್ಲರ್​ 2022ರ ಮಣಿಪುರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಈ ವೇಳೆ ಅವರು ಪ್ರಚಾರಕ್ಕಾಗಿ 2&3 ಕೋಟಿ ರೂ. ಖರ್ಚು ಮಾಡಿದ್ದರು. ಈ ಅಪಾರ ನಷ್ಟದಿಂದ ಮೇರಿ ಕೋಮ್​ ಸಿಟ್ಟಾಗಿದ್ದರಿಂದ, ದಂಪತಿಯ ನಡುವೆ ವಿರಸ ಮೂಡಿತ್ತು. ನಂತರದಲ್ಲಿ 42 ವರ್ಷದ ಮೇರಿ ಕೋಮ್​ ತನ್ನ ನಾಲ್ವರು ಮಕ್ಕಳೊಂದಿಗೆ (3 ಗಂಡು, 1 ಹೆಣ್ಣು) ರಿದಾಬಾದ್​ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ಕುಟುಂಬದ ಮೂಲಗಳ ಪ್ರಕಾರ, ಒನ್ಲರ್​ಗೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಇಷ್ಟವಿರಲಿಲ್ಲ. ಆದರೆ ಮಾಜಿ ರಾಜ್ಯಸಭಾ ಸದಸ್ಯೆ ಮೇರಿ ಕೋಮ್​ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶಿಸಿದ್ದರು. ಚುನಾವಣೆಯ ಸೋಲಿನ ನಂತರ ದಂಪತಿಯ ನಡುವೆ ಈ ಹಿಂದೆ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೊಡ್ಡದಾದವು ಮತ್ತು ಅದು ಇಬ್ಬರು ಪ್ರತ್ಯೇಕವಾಗಿ ವಾಸಿಸುವಷ್ಟು ಗಂಭೀರ ಸ್ವರೂಪ ಪಡೆಯಿತು.

ಮೇರಿ ಕೋಮ್​ ಈಗ ಬೇರೊಬ್ಬ ವ್ಯಕ್ತಿಯೊಂದಿಗೆ ನಂಟು ಕೂಡ ಹೊಂದಿದ್ದಾರೆ. ಆತ ಇನ್ನೋರ್ವ ಮಹಿಳಾ ಬಾಕ್ಸರ್​ನ ಪತಿಯಾಗಿದ್ದಾನೆ ಮತ್ತು ಮೇರಿ ಕೋಮ್​ ಫೌಂಡೇಷನ್​ನ ಚೇರ್ಮನ್​ ಕೂಡ ಆಗಿದ್ದಾನೆ. ಆತನನ್ನು ಮೇರಿ ಕೋಮ್​ ತನ್ನ ಇತ್ತೀಚೆಗಿನ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಉದ್ಯಮ ಸಹವರ್ತಿ ಎಂದು ಕರೆದಿದ್ದಾರೆ ಮತ್ತು ಆತನ ಜತೆಯಲ್ಲೇ ಮಹಾಕುಂಭಕ್ಕೂ ಭೇಟಿ ನೀಡಿದ್ದರು ಎಂದು ಬಾಕ್ಸಿಂಗ್​ ವಲಯದ ಮೂಲಗಳು ಮಾಹಿತಿ ನೀಡಿವೆ.

ಮೇರಿಕೋಮ್​&ಒನ್ಲರ್​ ದಂಪತಿ ವಿಚ್ಛೇದನಕ್ಕಾಗಿ ಇನ್ನೂ ಅಧಿಕೃತವಾಗಿ ಅರ್ಜಿ ಸಲ್ಲಿಸಿಲ್ಲ. ಇದರ ನಡುವೆ ಪತಿಗೆ ಮಕ್ಕಳನ್ನು ಭೇಟಿಯಾಗಲು ಮೇರಿ ಕೋಮ್​ ಅವಕಾಶ ನೀಡುತ್ತಿಲ್ಲ. ಮೇರಿ ಬಾಕ್ಸಿಂಗ್​ ವೃತ್ತೀಜಿವನದಲ್ಲಿ ಬಿಜಿಯಾಗಿದ್ದ ಸಮಯದಲ್ಲಿ ಒನ್ಲರ್​ ತನ್ನ ುಟ್​ಬಾಲ್​ ವೃತ್ತೀಜಿವನವನ್ನು ತ್ಯಜಿಸಿ ಮಕ್ಕಳ ಆರೈಕೆಯ ಸಂಪೂರ್ಣ ಜವಾಬ್ದಾರಿ ನಿಭಾಯಿಸಿದ್ದರು. ಇದೀಗ ಮಕ್ಕಳ ಭೇಟಿ ಅವಕಾಶ ಸಿಗದೆ ಭಾರಿ ನೊಂದಿದ್ದಾರೆ ಎಂದು ಒನ್ಲರ್​ ಆಪ್ತ ಮೂಲಗಳು ತಿಳಿಸಿವೆ.

2005ರಲ್ಲಿ ಮದುವೆಯಾಗಿದ್ದ ಮೇರಿ ಕೋಮ್​-ಒನ್ಲರ್​ಗೆ 2007ರಲ್ಲಿ ಅವಳಿ ಗಂಡು ಮಕ್ಕಳು ಜನಿಸಿದ್ದರು. 2013ರಲ್ಲಿ ಮತ್ತೋರ್ವ ಪುತ್ರ ಜನಿಸಿದ್ದ. ಬಳಿಕ ಹೆಣ್ಣು ಮಗು ಬೇಕೆಂಬ ಮೇರಿ ಆಸೆಯಂತೆ 2018ರಲ್ಲಿ ಹೆಣ್ಣು ಮಗುವೊಂದನ್ನು ದತ್ತು ಸ್ವೀಕರಿಸಿದ್ದರು. 2014ರಲ್ಲಿ ತೆರೆಕಂಡಿದ್ದ ಮೇರಿ ಕೋಮ್​ ಜೀವನ ಆಧಾರಿತ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸಿದ್ದರು.