ಕ್ರೀಡೆ

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಜಯದತ್ತ ಟೀಮ್ ಇಂಡಿಯಾ

ಮೆಲ್ಬೋರ್ನ್: ಭರ್ಜರಿ ಮುನ್ನಡೆಯ ಬಳಿಕ 2ನೇ ಇನಿಂಗ್ಸ್‌ನಲ್ಲೂ ಕರಾರುವಾಕ್ ಬೌಲಿಂಗ್ ದಾಳಿಯೊಂದಿಗೆ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹಾಕಿರುವ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿಯ 2ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನತ್ತ ದಾಪುಗಾಲು ಹಾಕಿದೆ. ಈ ಮೂಲಕ ಅಡಿಲೇಡ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಜತೆಗೆ 4 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸುವತ್ತ ಅಜಿಂಕ್ಯ ರಹಾನೆ ಪಡೆ ದಿಟ್ಟ ಹೆಜ್ಜೆ ಇಟ್ಟಿದೆ.

ಎಂಸಿಜಿ ಮೈದಾನದಲ್ಲಿ ಸೋಮವಾರ 5 ವಿಕೆಟ್‌ಗೆ 277 ರನ್‌ಗಳಿಂದ 3ನೇ ದಿನದಾಟ ಆರಂಭಿಸಿದ ಭಾರತ ತಂಡ 326 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ಅಮೂಲ್ಯ 131 ರನ್ ಮುನ್ನಡೆ ಸಂಪಾದಿಸಿತು. ಭೋಜನ ವಿರಾಮದ ಬಳಿಕ 2ನೇ ಇನಿಂಗ್ಸ್ ಆರಂಭಿಸಿದ ಆಸೀಸ್‌ಗೆ ಭಾರತೀಯ ಬೌಲರ್‌ಗಳು ಸಂಘಟಿತವಾಗಿ ನಿಯಂತ್ರಣ ಹೇರಿದರು. ಇದರಿಂದ ಆಸೀಸ್ ದಿನದಂತ್ಯಕ್ಕೆ 6 ವಿಕೆಟ್‌ಗೆ 133 ರನ್ ಗಳಿಸಿ ಸಂಕಷ್ಟದಲ್ಲಿದೆ. ಆತಿಥೇಯ ತಂಡ ಸದ್ಯ ಕೇವಲ 2 ರನ್ ಮುನ್ನಡೆಯಲ್ಲಿದ್ದು, ಭಾರತ ತಂಡ 4ನೇ ದಿನ ಆಸೀಸ್ ತಂಡದ ಕೊನೇ 4 ವಿಕೆಟ್‌ಗಳನ್ನು ಬೇಗನೆ ಕಬಳಿಸಿ ಸುಲಭವಾಗಿ ಗುರಿ ತಲುಪುವ ಲೆಕ್ಕಾಚಾರದಲ್ಲಿದೆ.

ಆಸ್ಟ್ರೇಲಿಯಾ: 195 ಮತ್ತು 66 ಓವರ್‌ಗಳಲ್ಲಿ 6 ವಿಕೆಟ್‌ಗೆ 133 (ವೇಡ್ 40, ಬರ್ನ್ಸ್ 4, ಲಬುಶೇನ್ 28, ಸ್ಮಿತ್ 8, ಹೆಡ್ 17, ಗ್ರೀನ್ 17*, ಕಮ್ಮಿನ್ಸ್ 15*, ಜಡೇಜಾ 25ಕ್ಕೆ 2, ಬುಮ್ರಾ 34ಕ್ಕೆ 1, ಉಮೇಶ್ 5ಕ್ಕೆ 1, ಸಿರಾಜ್ 23ಕ್ಕೆ 1, ಅಶ್ವಿನ್ 46ಕ್ಕೆ 1), ಭಾರತ: 115.1 ಓವರ್‌ಗಳಲ್ಲಿ 326 (ರಹಾನೆ 112, ಜಡೇಜಾ 57, ಅಶ್ವಿನ್ 14, ಸ್ಟಾರ್ಕ್ 78ಕ್ಕೆ 3, ಕಮ್ಮಿನ್ಸ್ 80ಕ್ಕೆ 2, ಲ್ಯಾನ್ 72ಕ್ಕೆ 3).