ಕ್ರೀಡೆ

IPL 2024: ಸನ್​ರೈಸರ್ಸ್​ V/s ಮುಂಬೈ; ಇಂದು ಸೋತವರ ಸೆಣಸಾಟ, ಮೊದಲ ಗೆಲುವಿಗಾಗಿ ಪೈಪೋಟಿ

ಹೈದರಾಬಾದ್​: ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿರುವ ತಂಡಗಳಾದ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಮುಂಬೈ ಇಂಡಿಯನ್ಸ್​ ಐಪಿಎಲ್​&17ರಲ್ಲಿ ಬುಧವಾರ ಮುಖಾಮುಖಿ ಆಗಲಿವೆ. ಟೂರ್ನಿಯ ಮೊದಲ ಗೆಲುವಿಗಾಗಿ ಉಭಯ ತಂಡಗಳ ನಡುವೆ ನಿಕಟ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

ಹೊಸ ನಾಯಕರ ಸಾರಥ್ಯದಲ್ಲಿ ಕಣಕ್ಕಿಳಿದ ಮೊದಲ ಪಂದ್ಯದಲ್ಲಿ ಮುಂಬೈ-ಸನ್​ರೈಸರ್ಸ್​ ಸೋಲು ಅನುಭವಿಸಿವೆ. ಗುಜರಾತ್​ ಟೈಟಾನ್ಸ್​ನಿಂದ ವರ್ಗಾವಣೆಗೊಂಡ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಮತ್ತು ಆಸೀಸ್​ ನಾಯಕರಾಗಿ ಅಪಾರ ಯಶ ಕಂಡು 20.5 ಕೋಟಿ ರೂ.ಗೆ ಸೇರ್ಪಡೆಯಾದ ಪ್ಯಾಟ್​ ಕಮ್ಮಿನ್ಸ್​ ಮೇಲೆ ಭಾರಿ ನಿರೀಕ್ಷೆ ಇತ್ತು. ಆದರೆ ಇಬ್ಬರೂ ಮೊದಲ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರು. ಹಾರ್ದಿಕ್​ ತನ್ನ ಮಾಜಿ ತಂಡವಾದ ಗುಜರಾತ್​ ಎದುರು 6 ರನ್​ಗಳಿಂದ ಸೋತಿದ್ದರೆ, ಸನ್​ರೈಸರ್ಸ್​ ತಂಡ ಹೆನ್ರಿಕ್​ ಕ್ಲಾಸೆನ್​ ಹೋರಾಟದ ನಡುವೆಯೂ ಕೆಕೆಆರ್​ ಎದುರು 4 ರನ್​ಗಳಿಂದ ಸೋತಿತ್ತು. ಉಭಯ ತಂಡಗಳು ಈಗ ಈ ಅಲ್ಪ ಅಂತರದ ಸೋಲಿನಿಂದ ಮೇಲೆದ್ದು ಬರುವ ಉತ್ಸಾಹದಲ್ಲಿವೆ.

ಪುಟಿದೇಳುವುದೇ ಮುಂಬೈ?

ಮುಂಬೈ ತಂಡ ಐಪಿಎಲ್​ನಲ್ಲಿ ಸತತ 12ನೇ ಬಾರಿ ಆರಂಭಿಕ ಪಂದ್ಯದಲ್ಲಿ ಸೋತಿದ್ದು, ಪುಟಿದೇಳುವ ಹಂಬಲದಲ್ಲಿದೆ. ಮೊದಲ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಜಸ್​ಪ್ರೀತ್​ ಬುಮ್ರಾ ಮಾತ್ರ ಪರಿಣಾಮಕಾರಿ ಎನಿಸಿದ್ದರೆ, ಬ್ಯಾಟಿಂಗ್​ನಲ್ಲಿ ಮಾಜಿ ನಾಯಕ ರೋಹಿತ್​ ಶರ್ಮ ಒದಗಿಸಿದ ಉತ್ತಮ ಆರಂಭ ಮತ್ತು ಇಂಪ್ಯಾಕ್ಟ್​ ಆಟಗಾರ ಡಿವಾಲ್ಡ್​ ಬ್ರೆವಿಸ್​ ನೀಡಿದ ಉಪಯುಕ್ತ ಕೊಡುಗೆಯಷ್ಟೇ ಸಮಾಧಾನಕರವಾಗಿತ್ತು. ಸುದೀರ್ಘ ವಿಶ್ರಾಂತಿಯ ಬಳಿಕ ಮರಳಿ ಕಣಕ್ಕಿಳಿದ ಇಶಾನ್​ ಕಿಶನ್​ ನಿರಾಸೆ ಮೂಡಿಸಿದರೆ, ನಾಯಕ ಹಾರ್ದಿಕ್​ ಪಾಂಡ್ಯಗೆ ಬ್ಯಾಟಿಂಗ್​ನಲ್ಲಿ ಹಿಂಬಡ್ತಿ ನೀಡಿದ ಮುಂಬೈ ನಿರ್ಧಾರವೂ ಕೈಕೊಟ್ಟಿತು. ಬೌಲಿಂಗ್​ನಲ್ಲಿ ಸ್ಪಿನ್ನರ್​ಗಳಾದ ಶಮ್ಸ್​ ಮುಲಾನಿ, ಪೀಯುಷ್​ ಚಾವ್ಲಾ ಸುಧಾರಿತ ನಿರ್ವಹಣೆ ತೋರಬೇಕಿದೆ.

ಸನ್​ಗೆ ತವರಿನ ಲಾಭ

ಟೂರ್ನಿಯ ಆರಂಭಿಕ 7 ಪಂದ್ಯಗಳಲ್ಲೂ ಆತಿಥೇಯ ತಂಡವೇ ಜಯಿಸಿದೆ. ಇದು ಸನ್​ರೈಸರ್ಸ್​ಗೆ ಗೆಲುವಿನ ಹಳಿ ಏರಲು ಸ್ಫೂರ್ತಿ ಎನಿಸಿದೆ. ಮಯಾಂಕ್​ ಅಗರ್ವಾಲ್​&ಅಭಿಷೇಕ್​ ಶರ್ಮ ಹಾಕಿಕೊಟ್ಟ ಉತ್ತಮ ಬುನಾದಿ ಮತ್ತು ಕ್ಲಾಸೆನ್​ ಸ್ಫೋಟಕ ಆಟದ ನಡುವೆಯೂ ಸನ್​ರೈಸರ್ಸ್​ ಮೊದಲ ಪಂದ್ಯ ಸೋತಿದ್ದು ನಿರಾಶಾದಾಯಕವಾಗಿತ್ತು. ಬೌಲಿಂಗ್​ನಲ್ಲಿ ಅನುಭವಿ ವೇಗಿ ಭುವನೇಶ್ವರ್​ ಕುಮಾರ್​ ದುಬಾರಿಯಾಗಿದ್ದು ಕೂಡ ಸನ್​ರೈಸರ್ಸ್​ಗೆ ಹಿನ್ನಡೆಯಾಗಿತ್ತು. ತವರಿನ ಪಿಚ್​ನಲ್ಲಿ ಈಗ ಸನ್​ರೈಸರ್ಸ್​ ಈ ತಪು$್ಪಗಳನ್ನು ಸರಿಪಡಿಸಿಕೊಳ್ಳಬೇಕಿದೆ.

ಸೂರ್ಯಕುಮಾರ್​ ಅಲಭ್ಯ

ವಿಶ್ವ ನಂ. 1 ಟಿ20 ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಮುಂಬೈ ತಂಡದ 2ನೇ ಲೀಗ್​ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಿಂದ ಸೂರ್ಯಕುಮಾರ್​ ಫಿಟ್ನೆಸ್​ ಬಗ್ಗೆ ಇನ್ನೂ ಹಸಿರು ನಿಶಾನೆ ದೊರೆತಿಲ್ಲ. ಇದರಿಂದಾಗಿ ಅವರಿನ್ನೂ ತಂಡವನ್ನು ಕೂಡಿಕೊಂಡಿಲ್ಲ. ಮುಂಬರುವ ಟಿ20 ವಿಶ್ವಕಪ್​ ದೃಷ್ಟಿಯಿಂದ ಬಿಸಿಸಿಐ, ಸೂರ್ಯಕುಮಾರ್​ ಪುನರಾಗಮನಕ್ಕೆ ಅವಸರ ಪಡದಿರಲು ನಿರ್ಧರಿಸಿದೆ ಎನ್ನಲಾಗಿದೆ.

ಮುಖಾಮುಖಿ: 21

ಮುಂಬೈ: 12

ಸನ್​ರೈಸರ್ಸ್​: 9

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​ ಜಿಯೋಸಿನಿಮಾ.