ಕ್ರೀಡೆ

ಬಾರ್ಡರ್​-ಗಾವಸ್ಕರ್​ ಟ್ರೋಫಿ ಆರಂಭಕ್ಕೆ ಮುನ್ನವೇ ಆಸೀಸ್​ಗೆ ಆಘಾತ; ಇದು ಆರ್​ಸಿಬಿಗೂ ಬ್ಯಾಡ್​ನ್ಯೂಸ್​!

ಮೆಲ್ಬೋರ್ನ್​: ಆಸ್ಟ್ರೆಲಿಯಾದ ಯುವ ಆಲ್ರೌಂಡರ್​ ಕ್ಯಾಮರಾನ್​ ಗ್ರೀನ್​ ಪ್ರವಾಸಿ ಭಾರತ ವಿರುದ್ಧದ ಮಹತ್ವದ ಬಾರ್ಡರ್​&ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಗೆ ಅಲಭ್ಯರಾಗಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಅವರು ಚೇತರಿಸಿಕೊಳ್ಳಲು ಕನಿಷ್ಠ 6 ತಿಂಗಳು ವಿಶ್ರಾಂತಿ ಅಗತ್ಯವೆನಿಸಿದೆ. ಇದರಿಂದಾಗಿ ನವೆಂಬರ್​ 22ರಿಂದ ನಡೆಯಲಿರುವ 5 ಪಂದ್ಯಗಳ ಸರಣಿಯಿಂದ ಹೊರಗುಳಿಯಲಿದ್ದು, ಆತಿಥೇಯ ಆಸ್ಟ್ರೆಲಿಯಾ ತಂಡ ಭಾರಿ ಹಿನ್ನಡೆ ಎದುರಿಸಿದೆ.

25 ವರ್ಷದ ಗ್ರೀನ್​ ಕಳೆದ ಇಂಗ್ಲೆಂಡ್​ ಪ್ರವಾಸದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಭಾರತ ವಿರುದ್ಧದ ಸರಣಿ ಮಾತ್ರವಲ್ಲದೆ ಮುಂದಿನ ವರ್ಷದ ಶ್ರೀಲಂಕಾ ಪ್ರವಾಸ ಮತ್ತು ಚಾಂಪಿಯನ್ಸ್​ ಟ್ರೋಫಿಯನ್ನೂ ಗ್ರೀನ್​ ತಪ್ಪಿಸಿಕೊಳ್ಳಲಿದ್ದಾರೆ. ಜತೆಗೆ ಐಪಿಎಲ್​ನಲ್ಲೂ ಆಡುವುದು ಅನುಮಾನವೆನಿಸಿದೆ. ಕ್ಯಾಮರಾನ್​ ಗ್ರೀನ್​ ಆರ್​ಸಿಬಿ ತಂಡದಲ್ಲಿರುವುದರಿಂದ ಇದು ಅದರ ಪಾಲಿಗೆ ಕೆಟ್ಟ ಸುದ್ದಿ ಎನಿಸಿದೆ. ಅಲ್ಲದೆ ಹರಾಜಿಗೆ ಮುನ್ನ ಗ್ರೀನ್​ರನ್ನು ಉಳಿಸಿಕೊಳ್ಳಬೇಕೇ, ಬೇಡವೇ ಎಂಬ ಗೊಂದಲವೂ ಆರ್​ಸಿಬಿ ತಂಡದಲ್ಲಿ ಎದುರಾಗಿದೆ.