ನ್ಯೂಯಾರ್ಕ್: ಭಾರತದ ಅನುಭವಿ ಆಟಗಾರ ಹಾಗೂ ಕನ್ನಡಿಗ ರೋಹನ್ ಬೋಪಣ್ಣ, ಆಸ್ಟ್ರೆಲಿಯಾದ ಮ್ಯಾಥ್ಯೂ ಎಬ್ಡೆನ್ ಜತೆಗೂಡಿ ವರ್ಷಾಂತ್ಯದ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮೆರೆದಿದ್ದಾರೆ. 43 ವರ್ಷದ ಬೋಪಣ್ಣ ಮುಕ್ತ ಟೆನಿಸ್ ಯುಗದಲ್ಲಿ ಗ್ರಾಂಡ್ ಸ್ಲಾಂ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ಗೇರಿದ ಅತ್ಯಂತ ಹಿರಿಯ ಆಟಗಾರರೆಂಬ ದಾಖಲೆ ಬರೆದಿದ್ದಾರೆ.
6ನೇ ಶ್ರೇಯಾಂಕಿತ ಬೋಪಣ್ಣ-ಎಬ್ಡೆನ್ ಜೋಡಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ನ ಹ್ಯೂಸ್ ಹೆರ್ರ್ಬಟ್ ಮತ್ತು ನಿಕೋಲಸ್ ಮಹುತ್ ಜೋಡಿಯನ್ನು 7-6 (7-3), 6-2 ನೇರಸೆಟ್ಗಳಿಂದ ಮಣಿಸಿತು.
ಬೋಪಣ್ಣ ಗ್ರಾಂಡ್ ಸ್ಲಾಂ ಟೂರ್ನಿಯ ಪುರುಷರ ಡಬಲ್ಸ್ನಲ್ಲಿ 13 ವರ್ಷಗಳ ಬಳಿಕ ಮತ್ತು 2ನೇ ಬಾರಿಗೆ ಫೈನಲ್ಗೇರಿದ ಸಾಧನೆ ಮಾಡಿದ್ದಾರೆ. ಅವರು ಈ ಮುನ್ನ 2010ರಲ್ಲಿ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಜತೆ ಮೊದಲ ಬಾರಿ ಈ ಸಾಧನೆ ಮಾಡಿದ್ದರು.
ಕೆನಡದ ಡೇನಿಯಲ್ ನೆಸ್ಟರ್ 43 ವರ್ಷ 4 ತಿಂಗಳು ವಯಸ್ಸಿನಲ್ಲಿ ಗ್ರಾಂಡ್ ಸ್ಲಾಂ ಟೂರ್ನಿಯ ಫೈನಲ್ಗೇರಿದ್ದು ಹಿಂದಿನ ದಾಖಲೆ. ಬೋಪಣ್ಣ 43 ವರ್ಷ 6 ತಿಂಗಳು ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಈಗಾಗಲೆ ಬೋಪಣ್ಣ ಸವಾಲು ಅಂತ್ಯಗೊಂಡಿದೆ.