ಬೆಂಗಳೂರು: ಕರೊನಾ ವೈರಸ್ ಭೀತಿಯಿಂದಾಗಿ ಕಳೆದ 6 ತಿಂಗಳಿಂದ ಸಂಪೂರ್ಣ ವಾಣಿಜ್ಯ ಚಟುವಟಿಕೆಗಳೇ ಬಂದ್ ಆಗಿವೆ. ಕೇವಲ ಕ್ರೀಡೆಯಷ್ಟೇ ಅಲ್ಲ, ಪ್ರತಿಯೊಂದು ಕ್ಷೇತ್ರಕ್ಕೂ ಇದರ ಬಿಸಿ ತಟ್ಟಿದೆ. ಕಳೆದ ಮಾರ್ಚ್ನಿಂದಲೂ ಹಣಕಾಸಿಗಾಗಿ ಪರತಪಿಸುತ್ತಿರುವವರ ಸಂಖ್ಯೆ ಕಡಿಮೆ ಏನು ಕಡಿಮೆಯಿಲ್ಲ. ದಿಗ್ಗಜ ಸಚಿನ್ ತೆಂಡುಲ್ಕರ್, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯಂಥ ಘಟಾನುಟಿಗಳಿಗೆ ಬ್ಯಾಟ್ ತಯಾರಿಸಿಕೊಟ್ಟಿದ್ದ ಅಶ್ರಾಫ್ ಚೌಧರಿಗೂ ಆರ್ಥಿಕ ಬಿಕ್ಕಟ್ಟು ಬಿಟ್ಟಿಲ್ಲ. ಆದರೆ, ಇವರ ನೆರವಿಗೆ ಬಂದಿರುವುದು ಯಾವುದೇ ಕ್ರಿಕೆಟಿಗನಲ್ಲ. ಬದಲಿಗೆ ನಟ ಸೋನು ಸೂದ್.
ಮುಂಬೈನ ಮೆಟ್ರೋ ಸಿನಿಮಾ ಬಳಿ ಪೂರ್ವಜರಿಂದಲೂ ಬ್ಯಾಟ್ ರಿಪೇರಿ, ಬ್ಯಾಟ್ ತಯಾರಕಾಗಿರುವ ಅಶ್ರಾಫ್ ಚೌಧರಿ ಕುಟುಂಬಸ್ಥರು, ರಾಷ್ಟ್ರೀಯ ತಂಡದ ಆಟಗಾರರಿಗೆ ಬ್ಯಾಟ್ ಪೂರೈಸಿದ್ದಾರೆ. ಇವರಲ್ಲಿ ಸಚಿನ್, ಕೊಹ್ಲಿ, ಆಸೀಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಪ್ರಮುಖರು. ಲಾಕ್ಡೌನ್ನಿಂದ ಅವರ ವ್ಯಾಪಾರ ವಹಿವಾಟು ಸಂಪೂರ್ಣ ಕುಸಿತ ಕಂಡಿದೆ. ಕಿಡ್ನಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ರಾಫ್ ಚೌಧರಿ ಕುರಿತು ಸುದ್ದಿ ಹರಡಿದಾಗ ನಟ ಸೋನು ಸೂದ್ ತಕ್ಷಣವೇ ನೆರವಿಗೆ ಧಾವಿಸಿದ್ದಾರೆ.
ಲಾಕ್ಡೌನ್ ವೇಳೆ ಮುಂಬೈನಲ್ಲಿ ಸಿಲುಕಿದ್ದ ಕರ್ನಾಟಕ ಸೇರಿದಂತೆ ಹೊರ ರಾಜ್ಯದ ಜನರನ್ನು ತಮ್ಮ ಊರುಗಳಿಗೆ ಸೇರಿಸಲು ಸೋನು ಸೂದ್ ಸ್ವತಃ ಖರ್ಚಿನಲ್ಲಿ ಬಸ್ ವ್ಯವಸ್ಥೆ ಮಾಡಿದ್ದರು. ಲಾಕ್ಡೌನ್ ವೇಳೆ ಸಾಕಷ್ಟು ಸಮಾಜ ಮುಖಿ ಸೇವೆಗಳಿಂದ ಸೋನು ಸೂದ್ ಗಮನಸೆಳೆದಿದ್ದರು.