ನವದೆಹಲಿ/ಪರ್ತ್:ಮುಂಬರುವ ಬಾರ್ಡರ್-ಗಾವಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ಗೆ ಮುನ್ನ ಭಾರತ ತಂಡದಲ್ಲಿ ಗಾಯಾಳುಗಳ ಪಟ್ಟಿ ಬೆಳೆಯುತ್ತ ಸಾಗಿದೆ. ಜತೆಗೆ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿವೆ. ವಾಕಾದಲ್ಲಿ ನಡೆಯುತ್ತಿರುವ ಆಂತರಿಕ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಶುಭಮಾನ್ ಗಿಲ್ ಎಡ ಹೆಬ್ಬೆರಳಿನ ಮುರಿತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ಅಭ್ಯಾಸ ಪಂದ್ಯದ ಎರಡನೇ ದಿನವಾದ ಶನಿವಾರ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಕ್ಕೆ ತುತ್ತಾದ ಶುಭಮಾನ್ ಬಳಿಕ ಮೈದಾನ ತೊರೆದರು. ‘ಅಭ್ಯಾಸ ಪಂದ್ಯದಲ್ಲಿ ಶುಭಮಾನ್ ಗಿಲ್ ಗಾಯಗೊಂಡಿದ್ದಾರೆ. ಜತೆಗೆ ಹೆಬ್ಬೆರಳಿನ ಮುರಿತಕ್ಕೆ ಒಳಗಾಗಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡದ ಸಮಾಲೊಚನೆಯ ಬಳಿಕ ಗಿಲ್ ಅವರನ್ನು ಸ್ಕಾೃನಿಂಗ್‌ಗೆ ಒಳಪಡಿಲಾಗಿದ್ದು, ಬೆರಳಿನಲ್ಲ ಮೂಳೆ ಮುರಿತ ಕಂಡುಬಂದಿದೆ’ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಮೊದಲ ಟೆಸ್ಟ್‌ಗೆ ಗಿಲ್ ಗೈರಾದರೆ ರೋಹಿತ್ ಅನುಪಸ್ಥಿತಿಯಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆ ಎದುರಾಗಲಿದೆ. ಜತೆಗೆ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನ ಹನ್ನೊಂದರ ಬಳಗದ ಆಯ್ಕೆಯ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಹೆಬ್ಬೆರಳಿನ ಮುರಿತದಿಂದ ಸಂಪೂರ್ಣ ಚೇತರಿಕೆಗೆ 14 ದಿನಗಳ ಅವಶ್ಯವಿದ್ದು, ಅಡಿಲೇಡ್‌ನಲ್ಲಿ ಡಿ.6ರಿಂದ ಆರಂಭವಾಗಲಿರುವ 2ನೇ ಪಂದ್ಯಕ್ಕೆ ಗಿಲ್ ಸಂಪೂರ್ಣ ಫಿಟ್ ಆಗುವ ಸಾಧ್ಯತೆಗಳಿವೆ. ಶುಕ್ರವಾರ ಎರಡು ಬಾರಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಗಿಲ್, ಕ್ರಮವಾಗಿ 28 ಹಾಗೂ ಅಜೇಯ 42 ರನ್‌ಗಳಿಸಿದ್ದರು.
ಗಿಲ್ ಹಾಗೂ ರೋಹಿತ್ ಶರ್ಮ ಮೊದಲ ಟೆಸ್ಟ್‌ಗೆ ಅಲಭ್ಯರಾದರೆ ಭಾರತ ಎ ತಂಡದಲ್ಲಿರುವ ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್ ನಡುವೆ ಒಬ್ಬರೂ ಆಸ್ಟ್ರೇಲಿಯಾದಲ್ಲಿ ಉಳಿದುಕೊಳ್ಳಲು ಬಿಸಿಸಿಐ ಸೂಚಿಸುವ ನಿರೀಕ್ಷೆ ಇದೆ.
ಅಭ್ಯಾಸ ಪಂದ್ಯದಲ್ಲಿ ರಾಹುಲ್ ಮೊಣಕೈಗೆ ಪೆಟ್ಟು: ಬಾರ್ಡರ್-ಗಾವಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಅಂತಿಮ ಸಿದ್ಧತೆ ಆರಂಭಿಸಿರುವ ಭಾರತ ತಂಡಕ್ಕೆ ಆಂತರಿಕ ತ್ರಿದಿನ ಅಭ್ಯಾಸ ಪಂದ್ಯದ ಮೊದಲ ದಿನವೇ ಸಂಕಷ್ಟ ಎದುರಾಗಿದೆ. ವಾಕಾದಲ್ಲಿ ಶುಕ್ರವಾರ ಆರಂಭಗೊಂಡ ಭಾರತ ಹಾಗೂ ಭಾರತ ಎ ತಂಡಗಳ ಆಟಗಾರರನ್ನು ಒಳಗೊಂಡ ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮೊಣಕೈಗೆ ಬಲವಾದ ಪೆಟ್ಟು ತಿಂದಿದ್ದಾರೆ.
ನಾಯಕ ರೋಹಿತ್ ಶರ್ಮ ಗೈರಿನಲ್ಲಿ ಭಾರತ ಪರ ಇನಿಂಗ್ಸ್ ಆರಂಭಿಸಲು ಮುಂಚೂಣಿಯಲ್ಲಿರುವ 32 ವರ್ಷದ ರಾಹುಲ್, 29 ರನ್ ಗಳಿಸಿದಾಗ ಮತ್ತೋರ್ವ ಕನ್ನಡಿಗ, ವೇಗಿ ಪ್ರಸಿದ್ಧ ಕೃಷ್ಣ ಎಸೆದ ಚೆಂಡು ಬಲ ಮೊಣಕೈಗೆ ಬಲವಾಗಿ ಬಡಿದಿದೆ. ತಕ್ಷಣವೇ ಫಿಸಿಯೋ ಸಲಹೆ ಪಡೆದ ರಾಹುಲ್ ಕೆಲ ನಿಮಿಷಗಳ ಸಮಾಲೋಚನೆ ಬಳಿಕ ಅಂಗಣ ತೊರೆದರು.
ಮುನ್ನೆಚ್ಚರಿಕೆ ಕ್ರಮವಾಗಿ ರಾಹುಲ್ ಅಂಗಣದಿಂದ ಹೊರನಡೆದಿದ್ದಾರೆ ಎನ್ನಲಾಗಿದ್ದು, ಮೊಣಕೈಗೆ ಬಿದ್ದಿರುವ ಪೆಟ್ಟಿನ ಗಂಭೀರತೆ ಅರಿಯಲು ಸ್ವಲ್ಪ ಸಮಯ ಹಿಡಿಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಪಂದ್ಯದ ನಂತರ ಆಡುವ ಬಳಗದಿಂದ ಹೊರಗುಳಿದಿರುವ ರಾಹುಲ್, ಪುನರಾಗಮನದ ನಿರೀಕ್ಷೆಯಲ್ಲಿದ್ದಾರೆ. ಅವರು 2023ರಲ್ಲಿ ಕೊನೆಯದಾಗಿ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಶತಕ ಸಿಡಿಸಿದ್ದರು. ನಂತರ ಆಡಿದ ಆಡಿದ 9 ಇನಿಂಗ್ಸ್‌ಗಳಲ್ಲಿ 2 ಅರ್ಧಶತಕ ಮಾತ್ರಗಳಿಸಿದ್ದಾರೆ.