ಲಂಡನ್: 2022ರ ಜನವರಿಯಲ್ಲಿ ಭಾರತ, ಕಾಮನ್ವೆಲ್ತ್ ಶೂಟಿಂಗ್ ಮತ್ತು ಆರ್ಚರಿ ಚಾಂಪಿಯನ್ಷಿಪ್ಗೆ ಆತಿಥ್ಯ ವಹಿಸಿಕೊಳ್ಳಲಿದೆ. ಇವೆರಡು ಕೂಟಗಳಲ್ಲಿ ಗೆಲ್ಲುವ ಪದಕಗಳು 2022ರ ಜುಲೈ-ಆಗಸ್ಟ್ನಲ್ಲಿ ಬರ್ವಿುಂಗ್ಹ್ಯಾಂನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ನ (ಸಿಡಬ್ಲ್ಯುಜಿ) ಪದಕಪಟ್ಟಿಯಲ್ಲಿ ಪರಿಗಣನೆಗೆ ಬರಲಿವೆ. ಇದರಿಂದಾಗಿ ಬರ್ವಿುಂಗ್ಹ್ಯಾಂ ಗೇಮ್ಸ್ನಿಂದ ಶೂಟಿಂಗ್ ಕೈಬಿಟ್ಟ ಬಗ್ಗೆ ಬಲವಾದ ಪ್ರತಿಭಟನೆ ಮಾಡಿದ್ದ ಭಾರತಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಅಲ್ಲದೆ ಬರ್ವಿುಂಗ್ಹ್ಯಾಂ ಗೇಮ್ಸ್ನಿಂದ ಶೂಟಿಂಗ್ ಸ್ಪರ್ಧೆ ಕೈಬಿಟ್ಟಿರುವುದು ಭಾರತದ ಪದಕ ಬೇಟೆಗೆ ಹಿನ್ನಡೆಯಾಗುವುದಿಲ್ಲ.
ಫೆ.21ರಿಂದ 23ರವರೆಗೆ ನಡೆದ ಕಾಮನ್ವೆಲ್ತ್ ಗೇಮ್್ಸ ಫೆಡರೇಷನ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬರ್ವಿುಂಗ್ಹ್ಯಾಂ ಗೇಮ್್ಸ ಮುಗಿದ ಒಂದು ವಾರದ ಬಳಿಕ ಅಂತಿಮ ಪದಕ ಪಟ್ಟಿಗೆ ಶೂಟಿಂಗ್, ಆರ್ಚರಿ ಚಾಂಪಿಯನ್ಷಿಪ್ಗಳ ಪದಕಗಳನ್ನು ಸೇರಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಕೂಟದ ಅಂತಿಮ ಪದಕ ರ್ಯಾಂಕಿಂಗ್ನಲ್ಲಿ ಏರುಪೇರುಗಳಾಗಲಿವೆ. ಅಲ್ಲದೆ ಇವೆರಡು ಕೂಟಗಳಲ್ಲಿ ಕ್ರೀಡಾಪಟುಗಳು ಗೆಲ್ಲುವ ಪದಕಗಳಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಗೆದ್ದ ಪದಕದಷ್ಟೇ ಮಾನ್ಯತೆ ಸಿಗಲಿವೆ.
ಸಿಡಬ್ಲ್ಯುಜಿಯಲ್ಲಿ ಭಾರತದ ಪ್ರಬಲ ಪದಕ ಬೇಟೆಯಾಗಿದ್ದ ಶೂಟಿಂಗ್ ಕೈಬಿಟ್ಟ ಕಾರಣ ಕೂಟದಿಂದ ಹಿಂದೆ ಸರಿಯುವ ಬೆದರಿಕೆಯನ್ನೂ ಹಾಕಲಾಗಿತ್ತು. ನಂತರ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಈ ಬೆದರಿಕೆ ಕೈಬಿಟ್ಟಿದ್ದರೂ, 2022ರಲ್ಲಿ ಶೂಟಿಂಗ್, ಆರ್ಚರಿ ಸ್ಪರ್ಧೆಗೆ ಪ್ರತ್ಯೇಕವಾಗಿ ಆತಿಥ್ಯ ವಹಿಸುವುದಾಗಿ ತಿಳಿಸಿತ್ತು. ಜತೆಗೆ ಇದರಲ್ಲಿನ ಪದಕಗಳನ್ನು ಸಿಡಬ್ಲ್ಯುಜಿ ಪದಕಪಟ್ಟಿಗೆ ಪರಿಗಣನೆ ಮಾಡಬೇಕೆಂದು ಷರತ್ತು ವಿಧಿಸಿತ್ತು. ಸಿಡಬ್ಲ್ಯುಜಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈಗ ಭಾರತದ ಬೇಡಿಕೆಯನ್ನು ಅಂಗೀಕರಿಸಲಾಗಿದೆ.
ಕಾಮನ್ವೆಲ್ತ್ ಶೂಟಿಂಗ್, ಆರ್ಚರಿ ಕೂಟಗಳು 2022ರ ಜನವರಿಯಲ್ಲಿ ಚಂಡೀಗಢದಲ್ಲಿ ನಡೆಯಲಿದ್ದರೆ, ಕಾಮನ್ವೆಲ್ತ್ ಗೇಮ್್ಸ ಅದೇ ವರ್ಷ ಜುಲೈ 27ರಿಂದ ಆಗಸ್ಟ್ 7ರವರೆಗೆ ಇಂಗ್ಲೆಂಡ್ನ ಬರ್ವಿುಂಗ್ಹ್ಯಾಂನಲ್ಲಿ ನಡೆಯಲಿದೆ. ಶೂಟಿಂಗ್ ಕೂಟದ ಖರ್ಚುವೆಚ್ಚವನ್ನು ಭಾರತದ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಭರಿಸಲಿದ್ದರೆ, ಆರ್ಚರಿ ಸ್ಪರ್ಧೆಗೆ ಕೇಂದ್ರ ಸರ್ಕಾರ ಅನುದಾನ ನೀಡಲಿದೆ. -ಪಿಟಿಐ