ಕ್ರೀಡೆ

ಆಸಿಸ್​ ವಿರುದ್ಧ ಅಂತಿಮ ಟೆಸ್ಟ್​ಗೂ ಮುನ್ನವೇ ಭಾರತಕ್ಕೆ ಬಿಗ್​ ಶಾಕ್​! ಗಾಯದಿಂದ ಸ್ಟಾರ್ ಆಟಗಾರ ಅಲಭ್ಯ | Team India

Team India : ಬಾರ್ಡರ್-ಗವಾಸ್ಕರ್ ಟ್ರೋಫಿ ಅಂಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಶುಕ್ರವಾರ (ಜ.02) ಸಿಡ್ನಿಯಲ್ಲಿ ಆರಂಭವಾಗಲಿದೆ. ಆದರೆ, ಈ ಪಂದ್ಯ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ.

ಟೀಮ್​ ಇಂಡಿಯಾ ವೇಗಿ ಆಕಾಶ್ ದೀಪ್ ಈ ಪಂದ್ಯವನ್ನು ಆಡುವುದಿಲ್ಲ. ಕಾರಣ ಅವರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಈ ವಿಚಾರವನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ. ಆದರೆ, ಅವರ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬುದನ್ನು ಗಂಭೀರ್​ ಈವರೆಗೆ ಹೇಳಿಲ್ಲ.

ಆಕಾಶ್​ ದೀಪ್ ಅವರು ಬ್ರಿಸ್ಬೇನ್ ಮತ್ತು ಮೆಲ್ಬೋರ್ನ್‌ನಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಎರಡೂ ಪಂದ್ಯಗಳಲ್ಲಿ ಐದು ವಿಕೆಟ್ ಕಬಳಿಸಿದರು. ಅವರ ಬೌಲಿಂಗ್ ಎದುರಿಸಲು ಆಸೀಸ್ ಬ್ಯಾಟ್ಸ್‌ಮನ್‌ಗಳು ತಡಕಾಡಿದರು. ಅವರ ಬೌಲಿಂಗ್‌ನಲ್ಲಿ ಫೀಲ್ಡರ್‌ಗಳು ಅನೇಕ ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ಹೆಚ್ಚಿನ ವಿಕೆಟ್‌ಗಳನ್ನು ಪಡೆಯಲು ಆಕಾಶ್​ ದೀಪ್​ಗೆ ಸಾಧ್ಯವಾಗಲಿಲ್ಲ.

28ರ ಹರೆಯದ ಬಲಗೈ ವೇಗಿ ಈ ಸರಣಿಯಲ್ಲಿ ಇದುವರೆಗೆ 87.5 ಓವರ್ ಬೌಲಿಂಗ್ ಮಾಡಿದ್ದಾರೆ. ಕೆಲಸದ ಒತ್ತಡದಿಂದಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾದ ಕಠಿಣ ಪಿಚ್‌ಗಳು ವೇಗದ ಬೌಲರ್‌ಗಳಿಗೆ ಮೊಣಕಾಲು, ಪಾದ ಮತ್ತು ಬೆನ್ನಿನ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಕ್ರಿಕೆಟ್ ವಿಶ್ಲೇಷಕರು ಹೇಳುತ್ತಾರೆ. ಆಕಾಶ್ ದೀಪ್ ಸ್ಥಾನಕ್ಕೆ ಹರ್ಷಿತ್ ರಾಣಾ ಅಥವಾ ಪ್ರಸಿದ್ಧ್ ಕೃಷ್ಣ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಸಿಡ್ನಿ ಟೆಸ್ಟ್‌ಗೆ ಭಾರತದ ಅಂತಿಮ ತಂಡದ ಕುರಿತು ಕೆಲವು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಯಾರು ಆಡುತ್ತಾರೆ ಎಂಬ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಅದರಲ್ಲೂ ನಾಯಕ ರೋಹಿತ್ ಶರ್ಮ ಅಂತಿಮ ತಂಡದಲ್ಲಿ ಇರುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ನಾಳೆ ಟಾಸ್‌ಗೂ ಮುನ್ನ ಪಿಚ್‌ ಪರಿಶೀಲನೆ ನಡೆಸಿ ನಂತರ ಅಂತಿಮ ತಂಡ ರಚನೆ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಗಂಭೀರ್‌ ಹೇಳಿದ್ದಾರೆ.

ರೋಹಿತ್ ಶರ್ಮ ಅಂತಿಮ ತಂಡದಲ್ಲಿ ಇರುತ್ತಾರೆ ಎಂದು ಹೇಳಲಾಗಿಲ್ಲ. ಇದೇ ವೇಳೆ ಮಾಧ್ಯಮಗೋಷ್ಠಿಯಲ್ಲಿ ಗಂಭೀರ್ ಮಾತ್ರ ಹಾಜರಿದ್ದು, ನಾಯಕ ರೋಹಿತ್ ಶರ್ಮ ಗೈರು ಹಾಜರಾಗಿರುವುದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಈ ಮೂಲಕ ನಾಳಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುವುದು ಅನುಮಾನವಾಗಿದೆ. (ಏಜೆನ್ಸೀಸ್​)