ನವದೆಹಲಿ: ಭಾರತಕ್ಕೆ 1983ರ ಕ್ರಿಕೆಟ್ ವರ್ಲ್ಡ್ ಕಪ್ ತಂದು ಕೊಟ್ಟ ತಂಡದ ಕ್ಯಾಪ್ಟನ್ ಕಪಿಲ್ ದೇವ್, ಟಿ20 ವರ್ಲ್ಡ್ ಕಪ್ನಲ್ಲಿ ಇಂದಿನ ಭಾರತ ತಂಡದ ನಿರಾಶಾದಾಯಕ ಆಟದ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೇ, ದೊಡ್ಡ ಹೆಸರುಳ್ಳ ಆಟಗಾರರು ಇಷ್ಟು ಕೆಟ್ಟ ಕ್ರಿಕೆಟ್ ಆಡಿದರೆ, ಐಪಿಎಲ್ನಲ್ಲಿ ಚೆನ್ನಾಗಿ ಆಡುತ್ತಿರುವ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವುದು ಉತ್ತಮ ಎಂದಿದ್ದಾರೆ.
ಹಿರಿಯ ಕ್ರಿಕೆಟಿಗ ಕಪಿಲ್ರ ಈ ಹೇಳಿಕೆಯು, ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ತನ್ನ ಎರಡನೇ ಪಂದ್ಯದಲ್ಲಿ ಸೋತ ಹಿನ್ನೆಲೆಯಲ್ಲಿ ಕೇಳಿಬಂದಿದೆ. ಭಾರತ ತಂಡ ಇದೀಗ ಪಂದ್ಯಾವಳಿಯಿಂದ ಹೊರಬೀಳುವ ಅಂಚಿನಲ್ಲಿದೆ. ತನ್ನ ಉಳಿದೆಲ್ಲಾ ಪಂದ್ಯಗಳನ್ನು ಗೆದ್ದು, ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಅಥವಾ ನಮೀಬಿಯ ತಂಡಗಳು ನ್ಯೂಜಿಲೆಂಡನ್ನು ಮಣಿಸಿದಲ್ಲಿ ಮಾತ್ರ ಭಾರತ ಮುಂದಿನ ಹಂತಕ್ಕೆ ಕ್ವಾಲಿಫೈ ಆಗಬಹುದು ಎನ್ನಲಾಗಿದೆ.
"ಇತರ ತಂಡಗಳ ಆಧಾರದ ಮೇಲೆ ನಾವು ಯಶಸ್ಸು ಗಳಿಸುವುದು ಸಮಂಜಸವಲ್ಲ. ನೀವು ವರ್ಲ್ಡ್ ಕಪ್ ಗೆಲ್ಲಬೇಕೆಂದಿದ್ದರೆ ಅಥವಾ ಸೆಮಿಫೈನಲ್ಸ್ ತಲುಪಬೇಕೆಂದಿದ್ದರೆ ಅದನ್ನು ನಿಮ್ಮ ಶಕ್ತಿಸಾಮರ್ಥ್ಯದ ಮೇಲೆ ಮಾಡಿ... ತಂಡದ ಆಯ್ಕೆ ಮಾಡುವವರು ದೊಡ್ಡ ಹೆಸರುಗಳ ಮತ್ತು ದೊಡ್ಡ ಆಟಗಾರರ ಭವಿಷ್ಯವನ್ನು ನಿರ್ಧರಿಸಬೇಕಾಗುವುದು" ಎಂದು ಎಬಿಪಿ ನ್ಯೂಸ್ಗೆ ಕಪಿಲ್ ದೇವ್ ಹೇಳಿದ್ದಾರೆ.
"ಅವರು ಯೋಚಿಸಬೇಕು.. ಐಪಿಎಲ್ನಲ್ಲಿ ಚೆನ್ನಾಗಿ ಆಡುತ್ತಿರುವ ಎಷ್ಟೋ ಯುವಜನರಿದ್ದಾರೆ, ಅವರಿಗೆ ಅವಕಾಶ ನೀಡುವ ಸಮಯ ಬಂದಿದೆಯಾ? ಮುಂದಿನ ಪೀಳಿಗೆಯನ್ನು ನಾವು ಹೇಗೆ ಉತ್ತಮಗೊಳಿಸುವುದು? ಅವರು ಸೋತರೆ ಯಾವುದೇ ಹಾನಿಯಿಲ್ಲ, ಏಕೆಂದರೆ ಅವರು ಅನುಭವ ಗಳಿಸುತ್ತಾರೆ. ಆದರೆ, ಈ ದೊಡ್ಡ ಆಟಗಾರರು ಉತ್ತಮ ಪ್ರದರ್ಶನ ನೀಡದಿದ್ದರೆ, ಇಷ್ಟು ಕೆಟ್ಟ ಕ್ರಿಕೆಟ್ ಆಡಿದರೆ, ಬಹುಮಟ್ಟಿಗೆ ಟೀಕೆಗಳು ಬರುತ್ತವೆ. ಬಿಸಿಸಿಐ ಮಧ್ಯಪ್ರವೇಶಿಸಬೇಕು; ಯುವ ಆಟಗಾರರನ್ನು ತಂಡಕ್ಕೆ ತರುವ ಬಗ್ಗೆ ಯೋಚಿಸಬೇಕು" ಎಂದು ಕಪಿಲ್ ಹೇಳಿದ್ದಾರೆ. (ಏಜೆನ್ಸೀಸ್)