ಬೆಂಗಳೂರು: ಫೆಬ್ರವರಿ 07ರಿಂದ ಮಾರ್ಚ್ 02ರವರೆಗೆ ನಡೆಯಲಿರುವ ಮೂರನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ಗೆ ತಂಡಗಳು ಈಗಾಗಲೇ ತಯಾರಿ ಆರಂಭಿಸಿದ್ದು, ಹಾಲಿ ಚಾಂಪಿಯನ್ಸ್ ಆರ್ಸಿಬಿ (RCB) ಒಂದು ಹೆಜ್ಜೆ ಮುಂದಿದ್ದಾರೆ ಎಂದರೆ ತಪ್ಪಾಗಲಾರದು. ಆದರೆ, ಟೂರ್ನಿ ಆರಂಭಕ್ಕೂ ಮುನ್ನವೇ ಆರ್ಸಿಬಿ ತಂಡಕ್ಕೆ ದೊಡ್ಡ ತಲೆನೋವೊಂದು ಎದುರಾಗಿದ್ದು, ಗಾಯದ ಸಮಸ್ಯೆಯಿಂದ ಸ್ಟಾರ್ ಆಟಗಾರ್ತಿಯೊಬ್ಬರು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಆಸ್ಟ್ರೇಲಿಯಾದ ಸ್ಟಾರ್ ಆಟಗಾರತಿ ಸೋಫಿ ಮೊಲಿನೆಕ್ಸ್ ಮೊಣಕಾಲಿನ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದು, ಬದಲಿ ಆಟಗಾರ್ತಿಯಾಗಿ ಇಂಗ್ಲೆಂಡ್ನ ಚಾರ್ಲಿ ಡೀನ್ ತಂಡ ಕೂಡಿಕೊಂಡಿದ್ದಾರೆ. 24 ವರ್ಷದ ಚಾರ್ಲಿ ಡೀನ್ ಈ ಹಿಂದೆ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಂಗ್ಲೆಂಡ್ ಆಟಗಾರ್ತಿಯನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
ಇಂಗ್ಲೆಂಡ್ ಹಾಗೂ ಲಂಡನ್ ಸ್ಪಿರಿಟ್ ತಂಡಗಳ ಪರ ಕಣಕ್ಕಿಳಿದಿರುವ ಚಾರ್ಲಿ ಡೀನ್ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ (RCB) ಪರ ಆಡಲಿದ್ದಾರೆ. ಇಂಗ್ಲೆಂಡ್ ಪರ 36 ಟಿ20 ಪಂದ್ಯಗಳನ್ನಾಡಿರುವ ಚಾರ್ಲಿ ಡೀನ್ ಈವರೆಗೆ 46 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದರೊಂದಿಗೆ 12 ಇನಿಂಗ್ಸ್ಗಳಲ್ಲಿ 135 ರನ್ ಕಲೆಹಾಕಿದ್ದಾರೆ.