ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪಾಕಿಸ್ತಾನ (Pakistan) ಮತ್ತು ಭಾರತ (India) ನಡುವಿನ ಹಗ್ಗಜಗ್ಗಾಟದಿಂದಲೇ ಈ ಟೂರ್ನಿ ಹೆಚ್ಚು ಸದ್ದು ಮಾಡುತ್ತಿದೆ. ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ (Hybrid Model) ನಡೆಸುವುದಾಗಿ ಹೇಳಿ ಮೂರು ಷರತ್ತುಗಳನ್ನು ವಿಧಿಸಿದ್ದ ಪಾಕಿಸ್ತಾನ ತಂಡವು ಇದೀಗ ಐಸಿಸಿಯ ನೂತನ ಅಧ್ಯಕ್ಷ ಜಯ್ ಷಾ (Jay Shah) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮತ್ತೊಮ್ಮೆ ತನ್ನ ಬಾಲವನ್ನು ಬಿಚ್ಚಿದ್ದು, ಪಾಕಿಸ್ತಾನದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ಕ್ರಿಕ್ಬಜ್ (CricBuzz) ವರದಿ ಮಾಡಿರುವ ಪ್ರಕಾರ, ಐಸಿಸಿಯ ನೂತನ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲಿ ಪಾಕಿಸ್ತಾನ ಹೊರತುಪಡಿಸಿ ಸದಸ್ಯ ರಾಷ್ಟ್ರಗಳು ಹೈಬ್ರಿಡ್ ಮಾದರಿಗೆ ಒಲವು ವ್ಯಕ್ತಪಡಿಸಿದ್ದು, ಪಾಕಿಸ್ತಾನ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯಬೇಕೆಂದರೆ ತನ್ನ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದಿದೆ. ಆದರೆ, ಪಾಕಿಸ್ತಾನದ ಷರತ್ತುಗಳನ್ನು ತಿರಸ್ಕರಿಸಿರುವ ಐಸಿಸಿಯ ನೂತನ ಅಧ್ಯಕ್ಷ ಜಯ್ ಷಾ (Jay Shah) ಆ ರೀತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
ತನ್ನ ಷರತ್ತುಗಳನ್ನು ನಿರಾಕರಿಸುತ್ತಿದ್ದಂತೆ ಹೊಸ ಬೇಡಿಕೆಯನ್ನು ಇರಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಭಾರತ, ಪಾಕಿಸ್ತಾನ ಮತ್ತು ಇನ್ನೊಂದು ದೇಶ ಒಳಗೊಂಡಂತೆ ತ್ರಿಕೋನ ಸರಣಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವಂತೆ ಬೇಡಿಕೆ ಇರಿಸಿದೆ. ಇದಲ್ಲದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನವನ್ನು ಪ್ರತ್ಯೇಕ ಗುಂಪುಗಳಲ್ಲಿ ಇರಿಸಿದರೆ ನಮ್ಮ ಕ್ರಿಕೆಟ್ ತಂಡವು ಬೇರೊಂದು ದೇಶಕ್ಕೆ ಹೋಗಿ ಆಡುವುದು ತಪ್ಪುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಯ ಮುಂದೆ ತನ್ನ ನೂತನ ಬೇಡಿಕೆಗಳನ್ನು ಇರಿಸಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪಿಸಿಬಿಯ ಮನವಿಯನ್ನು ಐಸಿಸಿ ಹಾಗೂ ಬಿಸಿಸಿಐ ತಿರಸ್ಕರಿಸುವ ಸಾಧ್ಯತೆ ಹೆಚ್ಚಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾವುದೇ ಗುಂಪುಗಳನ್ನು ಮಾಡದೆ ಇರಲು ನಿರ್ಧರಿಸಿರುವುದಾಗಿ ವರದಿಯಾಗಿದೆ. ಇಡೀ ವಿಶ್ವವೇ ಕಾತುರದಿಂದ ಕಾದು ನೋಡುವ ಭಾರತ-ಪಾಕಿಸ್ತಾನ ಪಂದ್ಯದ ವಿಚಾರವಾಗಿಯೂ ಸಭೆಯಲ್ಲಿ ಚರ್ಚಿಸಲಾಗಿದ್ದು, ಅಂತಿಮವಾಗಿ ಟೂರ್ನಿಯ ವೇಳಾಪಟ್ಟಿ ಹೊರಬಿದ್ದಾಗ ಸ್ಪಷ್ಟ ಚಿತ್ರಣ ಸಿಗಲಿದೆ.