ಕ್ರೀಡೆ

ಬೆಂಗಳೂರು ಬುಲ್ಸ್‌ಗೆ ರೋಚಕ ಗೆಲುವು: ತಮಿಳ್ ತಲೈವಾಸ್‌ಗೆ 7ನೇ ಸೋಲು

ನೋಯ್ಡ: ಭರತ್ (10 ) ನಡೆಸಿದ 10 ಯಶಸ್ವಿ ರೈಡಿಂಗ್‌ಗಳ ನಿರ್ವಹಣೆಯಿಂದ ಮೊದರ್ಲಾರ್ಧದ ಹಿನ್ನಡೆಯಿಂದ ಕಂಬ್ಯಾಕ್ ಮಾಡಿದ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ತಮಿಳ್ ತಲೈವಾಸ್ ಎದುರು 38-37ರಿಂದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಹೊಸ ವರ್ಷಕ್ಕೆ (2024) ಗೆಲುವಿನ ಮುನ್ನುಡಿ ಬರೆದಿದೆ.

ನೋಯ್ಡ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನೋಯ್ಡ ಚರಣದ ಭಾನುವಾರ ನಡೆದ 2ನೇ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತು. ಮೊದಲಾರ್ಧದಲ್ಲಿ ಒಮ್ಮೆ ಆಲೌಟ್ ಆದ ಬೆಂಗಳೂರು ಬುಲ್ಸ್ 17-20 ಹಿನ್ನಡೆ ಅನುಭವಿಸಿತು. ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿದ ಬುಲ್ಸ್ ಪಂದ್ಯದ 34ನೇ ನಿಮಿಷದಲ್ಲಿ ತಲೈವಾಸ್ ತಂಡವನ್ನು ಆಲೌಟ್ ಬಲೆಗೆ ಕೆಡವಿ ಅಂಕಗಳ ಅಂತರವನ್ನು ಒಂದಕ್ಕೆ ಇಳಿಸಿತು. ಅಂತಿಮ ಕ್ಷಣದವರೆಗೂ ಹೋರಾಟ ನಡೆಸಿದ ಬುಲ್ಸ್ ರೋಚಕ ಗೆಲುವು ಒಲಿಸಿಕೊಂಡಿತು. ನಾಯಕ ಸೌರಭ್ ನಂದಾಲ್, ನೀರಜ್ ನರ್ವಾಲ್ ಹಾಗೂ ವಿಕಾಸ್ ಕಂಡೋಲಾ ತಲಾ 4 ಅಂಕ ಕಲೆಹಾಕಿದರು. ತಲೈವಾಸ್ ಪರ ನರೇಂದರ್ (12) ಹೋರಾಟ ವ್ಯರ್ಥಗೊಂಡಿತು.