ಮಾರ್ಗೋವಾ: ಮುಂಬೈ ಸಿಟಿ ಆಟಗಾರರ ಆಕ್ರಮಣಕಾರಿ ನಿರ್ವಹಣೆ ಎದುರು ಮಂಕಾದ ಬೆಂಗಳೂರು ಫುಟ್ ಬಾಲ್ ಕ್ಲಬ್ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಹ್ಯಾಟ್ರಿಕ್ ಸೋಲನುಭವಿಸಿದೆ. ಫರ್ಟೊಡಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬಿಎಫ್ ಸಿ ತಂಡ 1-3 ಗೋಲುಗಳಿಂದ ಮುಂಬೈ ಸಿಟಿ ಎಫ್ ಸಿ ತಂಡಕ್ಕೆ ಶರಣಾಯಿತು. ಮತ್ತೊಂದೆಡೆ, ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ ಮುಂಬೈ ಸಿಟಿ ಎಫ್ ಸಿ, ಸತತ 8ನೇ ಪಂದ್ಯದಲ್ಲಿ ಅಜೇಯ ಸಾಧನೆ ಜತೆಗೆ 22 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಇದನ್ನೂ ಓದಿ: ಶ್ರೀಲಂಕಾ ಎದುರು ದಕ್ಷಿಣ ಆಫ್ರಿಕಾ ತಂಡಕ್ಕೆ ಸರಣಿ ಜಯ
ಪಂದ್ಯ ಆರಂಭಗೊಂಡ 15 ನಿಮಿಷಗಳ ಅಂತರದಲ್ಲಿ ಎರಡು ಗೋಲು ದಾಖಲಿಸುವ ಮೂಲಕ ಬಿಎಫ್ ಸಿ ತಂಡಕ್ಕೆ ಮುಂಬೈ ಆರಂಭಿಕ ಆಘಾತ ನೀಡಿತು. ಇದರಿಂದ ಮೊದಲಾರ್ಧದಲ್ಲಿ 0-2 ರಿಂದ ಹಿನ್ನಡೆ ಅನುಭವಿಸಿದ ಬಿಎಫ್ ಸಿ, ತಿರುಗೇಟು ನೀಡಲು ಯತ್ನಿಸಿತು. ದ್ವಿತೀಯಾರ್ಧದ ಆರಂಭಿಕ ನಿಮಿಷಗಳಲ್ಲಿ ಬೆಂಗಳೂರು ತಂಡ ಪ್ರಬಲ ಪೈಪೋಟಿ ನೀಡಲು ಯತ್ನಿಸಿತು. ಆದರೆ, ಬಿಎಫ್ ಸಿ ತಂಡ ಬಲಿಷ್ಠ ಫಾರ್ವರ್ಡ್ ಪಡೆಗೆ ಮುಂಬೈ ರಕ್ಷಾತ್ಮಕ ಪಡೆ ತಡೆಗೋಡೆಯಾಯಿತು. 79ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ನಾಯಕ ಸುನೀಲ್ ಛೇಟ್ರಿ ಗೋಲು ಸಿಡಿಸಿ ಗೋಲಿನ ಅಂತರವನ್ನು 1-2ಕ್ಕೆ ತಗ್ಗಿಸಿದರು. ಬಳಿಕ ಡ್ರಾ ಸಾಧಿಸಲು ಬಿಎಫ್ ಸಿ ಹೋರಾಡಿದರೂ ಗೋಲ್‌ಕೀಪರ್ ಗುರುಪ್ರೀತ್‌ಸಿಂಗ್ ಸಾಂಧು ಮಾಡಿದ ಎಡವಟ್ಟಿನ ಲಾಭ ಪಡೆದ ಮುಂಬೈ ತಂಡದ ಒಗ್ಬೇಚೆ ಗೋಲು ದಾಖಲಿಸಿ ಗೆಲುವಿನ ಅಂತರ ಹಿಗ್ಗಿಸಿದರು.
ಮುಂದಿನ ಎದುರಾಳಿ: ಈಸ್ಟ್ ಬೆಂಗಾಲ್
ಯಾವಾಗ: ಶನಿವಾರ (ಜ.9).