ಕ್ರೀಡೆ

ಇಂದಿನಿಂದ ಬೆಂಗಳೂರು ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟ : ಚಿನ್ನಸ್ವಾಮಿ ಕ್ರೀಡಾಂಗಣದ ಕೌಂಟರ್‌ನಲ್ಲಿ 3 ದಿನ ಸೇಲ್

ಬೆಂಗಳೂರು: ಐಪಿಎಲ್ ಪಂದ್ಯಗಳ ಯಶಸ್ವಿ ಆಯೋಜನೆಯ ಬಳಿಕ ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗಿದ್ದು, 4 ಪಂದ್ಯಗಳ ಟಿಕೆಟ್ ಮಾರಾಟ ದಿನಾಂಕವನ್ನು ಕೆಎಸ್‌ಸಿಎ ಪ್ರಕಟಿಸಿದ್ದು, ಆತಿಥೇಯ ಭಾರತ ತಂಡದ ಹೊರತಾದ ಪಂದ್ಯಗಳ ಟಿಕೆಟ್ ಮಾರಾಟ ಪ್ರಕ್ರಿಯೆ ಮಂಗಳವಾರ ಆರಂಭವಾಗಲಿದೆ.

ಈಗಾಗಲೆ ಆನ್‌ಲೈನ್‌ನಲ್ಲಿ ಟಿಕೆಟ್‌ಗಳು ತ್ವರಿತಗತಿಯಲ್ಲಿ ಮಾರಾಟವಾಗುತ್ತಿರುವ ನಡುವೆ ಕ್ರೀಡಾಂಗಣದ ನಾಲ್ಕು ಕೌಂಟರ್‌ನಲ್ಲಿ ಟಿಕೆಟ್ ಮಾರಾಟ ನಡೆಯಲಿದೆ. ನವೆಂಬರ್ 12ರ ಭಾರತ ಮತ್ತು ನೆದರ್ಲೆಂಡ್ ನಡುವಿನ ಪಂದ್ಯ ಹೊರತುಪಡಿಸಿ, ಅಕ್ಟೋಬರ್ 20ರ ಆಸ್ಟ್ರೇಲಿಯಾ-ಪಾಕಿಸ್ತಾನ, 26ರ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್, ಹಾಗೂ ನವೆಂಬರ್ 4, ನ್ಯೂಜಿಲೆಂಡ್- ಪಾಕಿಸ್ತಾನ ಹಾಗೂ 9ರಂದು ನಡೆಯಲಿರುವ ನ್ಯೂಜಿಲೆಂಡ್- ಶ್ರೀಲಂಕಾ ನಡುವಿನ ಪಂದ್ಯಗಳ ಟಿಕೆಟ್ ಮಾರಾಟ ಮಾಡಲಾಗುವುದು ಎಂದು ಕೆಎಸ್‌ಸಿಎ ತಿಳಿಸಿದೆ.

ಅಕ್ಟೋಬರ್ 17, 18 ಹಾಗೂ 19 ರಂದು ಕ್ರೀಡಾಂಗಣದ ಗೇಟ್ ಸಂಖ್ಯೆ 2 ಮತ್ತು 4 (ಕಬ್ಬನ್ ರಸ್ತೆ) ಹಾಗೂ ಗೇಟ್ ಸಂಖ್ಯೆ 16,18ರಲ್ಲಿ (ಕ್ವೀನ್ಸ್ ರಸ್ತೆ) ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೌಂಟರ್‌ಗಳಲ್ಲಿ ಟಿಕೆಟ್ ಖರೀದಿಸಬಹುದಾಗಿದೆ. ಸೀಮಿತ ಸಂಖ್ಯೆಯ ಟಿಕೆಟ್‌ಗಳು ಮಾತ್ರ ಮಾರಾಟಕ್ಕಿದ್ದು, ಒಬ್ಬ ವ್ಯಕ್ತಿ ಗರಿಷ್ಠ 2 ಟಿಕೆಟ್ ಮಾತ್ರ ಖರೀದಿ ಮಾಡಬಹುದಾಗಿದೆ. ಆನ್‌ಲೈನ್ ಪಾವತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಟಿಕೆಟ್ ದರಗಳನ್ನು ಕನಿಷ್ಠ 750 ರೂಪಾಯಿಗಳಿಂದ ಗರಿಷ್ಠ 25 ಸಾವಿರದವರೆಗೆ ನಿಗದಿಪಡಿಸಲಾಗಿದೆ.