ಬೆಂಗಳೂರು: ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಮತ್ತೊಂದು ರೋಚಕ ಪಂದ್ಯವಾಡಿದ ದಿಗ್ಗಜ ಲಿಯಾಂಡರ್ ಪೇಸ್, ಬೆಂಗಳೂರು ಓಪನ್ ಟೆನಿಸ್ ಚಾಲೆಂಜರ್ ಟೂರ್ನಿಯಲ್ಲಿ ಫೈನಲ್ಗೇರಿದ್ದಾರೆ. ಈ ಮೂಲಕ ತವರಿನಲ್ಲಿ ಆಡುತ್ತಿರುವ ವೃತ್ತಿಜೀವನದ ಕಟ್ಟಕಡೆಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ವಿದಾಯ ಹೇಳುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.
ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ಶುಕ್ರವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಗೆಲುವಿಗಾಗಿ ಒಂದು ಗಂಟೆ 20 ನಿಮಿಷಗಳ ಕಾಲ ಹೋರಾಟ ನಡೆಸಿದರು. ಪ್ರಧಾನ ಕೋರ್ಟ್ನಲ್ಲಿ ಸಿಂಗಲ್ಸ್ ವಿಭಾಗದ ಎಲ್ಲ ಪಂದ್ಯಗಳು ಮೂರು ಸೆಟ್ಗಳ ಮುಖಾಮುಖಿಯಾಗಿದ್ದರಿಂದ ಸಂಜೆ 5 ಗಂಟೆಗೆ ಆರಂಭವಾಗಬೇಕಿದ್ದ ಡಬಲ್ಸ್ ಸೆಮಿಫೈನಲ್ ಪಂದ್ಯ ರಾತ್ರಿ 8 ಗಂಟೆಗೆ ನಡೆಯಿತು. ಪೇಸ್ರ ಆಟವನ್ನು ನೋಡಬೇಕೆಂದು ಬಂದಿದ್ದ ಸಾವಿರಕ್ಕೂ ಅಧಿಕ ಅಭಿಮಾನಿಗಳಿಗೆ ದಿಗ್ಗಜ ಆಟಗಾರ ಬೇಸರ ಮಾಡಲಿಲ್ಲ. ರಂಜನೀಯ ನಿರ್ವಹಣೆಯ ಮೂಲಕ ಪೇಸ್, ಎಬ್ಡೆನ್ ಜೋಡಿ 6-4, 3-6, 10-7 ರಿಂದ ಇಸ್ರೇಲ್ನ ಅನುಭವಿ 42 ವರ್ಷದ ಜೊನಾಥನ್ ಎಲ್ರಿಚ್ ಹಾಗೂ ಬೆಲಾರಸ್ನ ಆಂಡ್ರೆ ವಾಸಿಲೆವಸ್ಕಿ ಜೋಡಿಯನ್ನು ಮಣಿಸಿತು.
ಮೊದಲ ಸೆಟ್ನ ಮೊದಲ ಗೇಮ್ಲ್ಲಿಯೇ ಎದುರಾಳಿಯ ಸರ್ವ್ ಬ್ರೇಕ್ ಮಾಡಿ ಮುನ್ನಡೆ ಕಂಡಿದ್ದ ಇಂಡೋ-ಆಸ್ಟ್ರೇಲಿಯಾ ಜೋಡಿ ನಂತರ ಗೇಮ್ಳಲ್ಲಿ ಸರ್ವ್ಗಳನ್ನು ಉಳಿಸಿಕೊಳ್ಳುವ ಮೂಲಕ 30 ನಿಮಿಷದಲ್ಲಿ ಸೆಟ್ ಗೆಲ್ಲುವ ಮೂಲಕ ಮುನ್ನಡೆ ಕಂಡಿತು. 2ನೇ ಗೇಮ್ಲ್ಲೂ ಇಂಡೋ-ಆಸೀಸ್ ಜೋಡಿ ಉತ್ತಮ ಆರಂಭ ಪಡೆದಿತ್ತು. ಆದರೆ, ನಾಲ್ಕನೇ ಗೇಮ್ಲ್ಲಿ ಮ್ಯಾಥ್ಯೂ ಎಬ್ಡೆನ್ರ ಕೆಟ್ಟ ಸರ್ವ್ ನಿಂದ ಎದುರಾಳಿ 1-3 ಮುನ್ನಡೆ ಕಂಡುಕೊಂಡಿತು. ಈ ಗೇಮ್ಲ್ಲಿ ಎರಡು ಬಾರಿ ಡಬಲ್ಫಾಲ್ಟ್ ಎಸಗಿದ ಎಬ್ಡೆನ್ ಎದುರಾಳಿ ಮುನ್ನಡೆ ಪಡೆಯಲು ಕಾರಣರಾದರು. ಅಂದಾಜು ಅರ್ಧಗಂಟೆಯ ಆಟದಲ್ಲಿ 2ನೇ ಸೆಟ್ನಲ್ಲಿ ಇಂಡೋ-ಆಸೀಸ್ ಜೋಡಿ ಸೋಲು ಕಂಡಿದ್ದರಿಂದ ಪಂದ್ಯ ಸಮಬಲವಾಗಿತ್ತು. ಫಲಿತಾಂಶ ನಿರ್ಣಯಕ್ಕಾಗಿ ನಡೆದ ಸೂಪರ್ ಟೈಬ್ರೇಕರ್ನಲ್ಲಿ ಆಕರ್ಷಕ ನಿರ್ವಹಣೆ ತೋರಿದ ಪೇಸ್-ಎಬ್ಡೆನ್ ಜೋಡಿ 10-7ರಿಂದ ಗೆಲ್ಲುವ ಮೂಲಕ ಪ್ರಶಸ್ತಿ ಹಂತಕ್ಕೇರಿದರು.
ಸೆಮಿಫೈನಲ್ಗೆ ಒಕ್ಲೆಪ್ಪೊ, ಡಕ್ವರ್ತ್
ಸಿಂಗಲ್ಸ್ ವಿಭಾಗದಲ್ಲಿ ಭಾರತದ ಯಾವುದೇ ಸ್ಪರ್ಧಿಗಳು ಇರದ ಕಾರಣ ಹೆಚ್ಚಿನ ಪ್ರೇಕ್ಷಕರು ಇರಲಿಲ್ಲ. ಕ್ವಾರ್ಟರ್ಫೈನಲ್ ಹಂತದಲ್ಲಿ ಮತ್ತಿಬ್ಬರು ಶ್ರೇಯಾಂಕಿತ ಆಟಗಾರರು ನಿರ್ಗಮನ ಕಂಡರು. ಇಟಲಿಯ ಶ್ರೇಯಾಂಕ ರಹಿತ ಆಟಗಾರ 22 ವರ್ಷದ ಜೂಲಿಯನ್ ಒಕ್ಲೆಪ್ಪೊ 7-6 (4), 6-7 (3), 6-4 ರಿಂದ ಬೆಲಾರಸ್ನ 13ನೇ ಶ್ರೇಯಾಂಕದ ಆಟಗಾರ ಇಲ್ಯಾ ಇವಾಶ್ಕರನ್ನು ಸೋಲಿಸಿದರು. ಮೂರು ಸೆಟ್ನ ಮ್ಯಾರಥಾನ್ ಪಂದ್ಯದಲ್ಲಿ ದೈತ್ಯ ಸಂಹಾರಿ ಆಟವನ್ನು ಮುಂದುವರಿಸಿದ ಒಕ್ಲೆಪ್ಪೊ 2 ಗಂಟೆ 40 ನಿಮಿಷದ ಪಂದ್ಯದಲ್ಲಿ ಗೆಲುವು ಸಾಧಿಸಿ ಉಪಾಂತ್ಯಕ್ಕೇರಿದರು. ಇನ್ನೊಂದು ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್ 4ನೇ ಶ್ರೇಯಾಂಕದ ಆಸ್ಟ್ರೇಲಿಯಾದ ಜೇಮ್್ಸ ಡಕ್ವರ್ತ್ 6-7 (5), 6-0, 6-2 ರಿಂದ ಇಟಲಿಯ ಥಾಮಸ್ ಫ್ಯಾಬಿಯಾನೋರನ್ನು ಸೋಲಿಸಿದರೆ, 2ನೇ ಶ್ರೇಯಾಂಕದ ಇಟಲಿ ಆಟಗಾರ ಸ್ಟೆಫಾನೋ ಟ್ರಾವಾಗ್ಲಿಯಾ 6-4, 4-6, 6-2 ರಿಂದ ಸ್ಲೋವೇನಿಯಾದ ಬ್ಲಾಜ್ ರೋಲಾರನ್ನು ಸೋಲಿಸಿ ಉಪಾಂತ್ಯ ಸಾಧನೆ ಮಾಡಿದರು. 3ನೇ ಶ್ರೇಯಾಂಕದ ಆಟಗಾರ ಜಪಾನ್ನ ಯೂಚಿ ಸುಗಿತಾ ಅಚ್ಚರಿಯ ಆಘಾತ ಎದುರಿಸಿದರು.
ಫ್ರಾನ್ಸ್ನ ಬೆಂಜಮಿನ್ ಬೊಂಜಿ 6-7 (5), 7-5, 6-4 ರಿಂದ ಸುಗಿತಾರನ್ನು ಟೂರ್ನಿಯಿಂದ ಹೊರಹಾಕಿದರು.
ಪುರುಷರ ಸಿಂಗಲ್ಸ್ ಸೆಮಿಫೈನಲ್
ಜೂಲಿಯನ್ ಒಕ್ಲೆಪ್ಪೊ-ಜೇಮ್್ಸ ಡಕ್ವರ್ತ್
ಬೆಂಜಮಿನ್ ಬೊಂಜಿ-ಸ್ಟೆಫಾನೋ ಟ್ರಾವಾಗ್ಲಿಯಾ
ಆರಂಭ: ಮಧ್ಯಾಹ್ನ 2.00
| ಸಂತೂಷ್ ನಾಯ್ಕ್