ಬೆಂಗಳೂರು: ತವರಿನಲ್ಲಿ ವೃತ್ತಿಜೀವನದ ಕಟ್ಟಕಡೆಯ ಟೂರ್ನಿ ಆಡುತ್ತಿರುವ ಭಾರತದ ದಿಗ್ಗಜ ಆಟಗಾರ ಲಿಯಾಂಡರ್ ಪೇಸ್ ಮತ್ತೊಂದು ರಂಜನೀಯ ನಿರ್ವಹಣೆಯೊಂದಿಗೆ ಬೆಂಗಳೂರು ಓಪನ್ ಚಾಲೆಂಜರ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಹಂತಕ್ಕೇರಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಸಂಭ್ರಮ ಸಿಕ್ಕಿತಾದರೂ, ಸಿಂಗಲ್ಸ್ ವಿಭಾಗದಲ್ಲಿ ಅನಿರೀಕ್ಷಿತ ಫಲಿತಾಂಶ ದಾಖಲಾದವು. ಹಾಲಿ ಚಾಂಪಿಯನ್ ಪ್ರಜ್ಞೇಶ್ ಗುಣೇಶ್ವರನ್ ಸೇರಿದಂತೆ ಭಾರತದ ಆರು ಆಟಗಾರರು ಗುರುವಾರ ಸವಾಲನ್ನು ಕೊನೆಗೊಳಿಸಿದರು. ಆ ಮೂಲಕ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಮುಗಿದಿದ್ದು, ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ವಿದೇಶಿ ಆಟಗಾರ ಪ್ರಶಸ್ತಿ ಜಯಿಸುವುದು ಖಚಿತವಾಗಿದೆ.
ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ಸಂಜೆಯ ವೇಳೆ ನಡೆದ ಡಬಲ್ಸ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 46 ವರ್ಷದ ಲಿಯಾಂಡರ್ ಪೇಸ್ ಹಾಗೂ 32 ವರ್ಷದ ಆಸ್ಟ್ರೇಲಿಯಾದ ಮ್ಯಾಥ್ಯೂ ಎಡ್ಬನ್ ಜೋಡಿ 7-5, 0-6, 10-7 ಸೆಟ್ಗಳಿಂದ, ಕಳೆದ ವಾರ ಮಹಾರಾಷ್ಟ್ರ ಓಪನ್ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದ ಸ್ವೀಡನ್ನ ಆಂಡ್ರೆ ಗೊರಾನ್ಸನ್ ಹಾಗೂ ಇಂಡೋನೇಷ್ಯಾದ ಕ್ರಿಸ್ಟೋಫರ್ ರುಂಗ್ಕಟ್ ಜೋಡಿಯನ್ನು ಸೋಲಿಸಿತು. 1 ಗಂಟೆ 15 ನಿಮಿಷದ ರೋಚಕ ಪಂದ್ಯದಲ್ಲಿ ಮೊದಲ ಸೆಟ್ಅನ್ನು ಕೊನೇ ಹಂತದಲ್ಲಿ ಎದುರಾಳಿಯ ಸರ್ವ್ ಬ್ರೇಕ್ ಮಾಡಿ ಗೆಲುವು ಕಂಡಿದ್ದ ಪೇಸ್ ಜೋಡಿ, 2ನೇ ಸೆಟ್ನಲ್ಲಿ ಒಂದೂ ಗೇಮ್ಲ್ಲಿ ಜಯ ಕಾಣದೆ ಸೋಲು ಎದುರಿಸಿತ್ತು. ನಿರ್ಣಾಯಕವಾಗಿದ್ದ ಸೂಪರ್ ಟೈಬ್ರೇಕ್ನಲ್ಲಿ 9-4ರಿಂದ ಮುನ್ನಡೆ ಕಾಣುವ ಮೂಲಕ ಸುಲಭ ಜಯದ ಹಾದಿಯಲ್ಲಿದ್ದರು. ಈ ಹಂತದಲ್ಲಿ ಸತತ ಮೂರು ಅಂಕ ಗೆದ್ದು ಎದುರಾಳಿ ಜೋಡಿ ತಿರುಗೇಟು ನೀಡುವ ಯತ್ನದಲ್ಲಿತ್ತು. ಈ ಯತ್ನವನ್ನು ಮಣಿಸಿದ ಪೇಸ್ ಜೋಡಿ 10-7 ರಿಂದ ಸೂಪರ್ಟೈಬ್ರೇಕ್ ಹಾಗೂ ಪಂದ್ಯವನ್ನು ಗೆದ್ದುಕೊಂಡರು. ಫೈನಲ್ಗೇರುವ ಸಲುವಾಗಿ ಪೇಸ್ ಜೋಡಿ ಇಸ್ರೇಲ್ನ ಜೊನಾಥನ್ ಎಲ್ರಿಚ್ ಹಾಗೂ ಬೆಲಾರಸ್ನ ಆಂಡ್ರೆ ವಾಸಿಲೆವಸ್ಕಿ ಜೋಡಿಯನ್ನು ಎದುರಿಸಲಿದೆ. 4ನೇ ಶ್ರೇಯಾಂಕದ ಪೂರವ್ ರಾಜಾ ಹಾಗೂ ರಾಮ್ುಮಾರ್ ರಾಮನಾಥನ್ ಜೋಡಿ, ಸಾಕೇತ್ ಮೈನೇನಿ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ರೀಡ್ ಜೋಡಿ ಕೂಡ ಸೆಮಿಫೈನಲ್ ಹಂತಕ್ಕೇರಿದವು.
ಸಿಂಗಲ್ಸ್ನಲ್ಲಿ ಸಾಲು-ಸಾಲು ಸೋಲು
ಹಾಲಿ ಚಾಂಪಿಯನ್ ಪ್ರಜ್ಞೇಶ್ ಗುಣೇಶ್ವರನ್ 6-7 (5), 0-6 ರಿಂದ ಫ್ರಾನ್ಸ್ನ ಬೆಂಜಮಿನ್ ಬೊಂಜಿಗೆ ಸೋತರೆ, ಹಾಲಿ ರನ್ನರ್ಅಪ್ ಸುಮಿತ್ ನಗಾಲ್ 3-6, 3-6 ರಿಂದ ರಷ್ಯಾದ ಬ್ಲಾಜ್ ರೋಲಾಗೆ ಶರಣಾದರು. ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದ ಹಾಲಿ ರಾಷ್ಟ್ರೀಯ ಚಾಂಪಿಯನ್ ರಾಜ್ಯದ ನಿಕ್ಕಿ ಪೂಣಚ್ಚ 5-7, 3-6 ರಿಂದ ಜಪಾನ್ನ ಯೂಚಿ ಸುಗಿತಾಗೆ ಶರಣಾದರು. ಅನುಭವಿಗಳಾದ ಸಾಕೇತ್ ಮೈನೇನಿ 4-6, 7-5, 2-6 ರಿಂದ ಥಾಮಸ್ ಫ್ಯಾಬಿಯಾನೋಗೆ ಮಣಿದರೆ, ರಾಮ್ುಮಾರ್ ರಾಮನಾಥನ್ 6-7 (2), 1-6 ರಿಂದ ಬೆಲಾರಸ್ನ ಇಲ್ಯಾ ಇವಾಶ್ಕಗೆ ಮಂಡಿಯೂರಿದರು. ಸಿದ್ಧಾರ್ಥ್ ರಾವತ್ರ ಹೋರಾಟವನ್ನು ಜೂಲಿಯನ್ ಒಕ್ಲೆಪ್ಪೋ ಕೊನೆಗೊಳಿಸಿದರು.
| ಸಂತೋಷ್ ನಾಯ್ಕ್