ಕ್ರೀಡೆ

ಬೆಂಗಳೂರಲ್ಲಿ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್: ಭಾರತದ ಅಗ್ರ ಬೈಕರ್‌ಗಳು ಸೇರಿ120 ಮಂದಿ ಭಾಗಿ

ಬೆಂಗಳೂರು: ಭಾರತೀಯ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಷಿಪ್‌ನಲ್ಲಿ ಆರಂಭಿಕ ದಕ್ಷಿಣ ವಲಯ ಸುತ್ತು ಭಾನುವಾರ ಸರ್ಜಾಪುರದಲ್ಲಿ ಆರಂಭವಾಗಿದ್ದು,ಭಾರತದ ಅಗ್ರ ಬೈಕರ್‌ಗಳು ಸೇರಿ ಒಟ್ಟು ದಾಖಲೆಯ 120 ರೇಸರ್‌ಗಳು ಭಾಗವಹಿಸಿದ್ದಾರೆ.

ರಾಜೇಂದ್ರ ಆರ್., ಸ್ಯಾಮುಯಲ್ ಜೇಕಬ್ ಹಾಗೂ ಸಚಿನ್ ಡಿ., ಪ್ರಮುಖ ಆಕರ್ಷಣೆ ಎನಿಸಿದ್ದು ಮುಕ್ತ ವಿಭಾಗದಲ್ಲಿ 550 ಸಿಸಿ ಚಾಂಪಿಯನ್‌ಷಿಪ್‌ಗೆ ಸೆಣಸಲಿದ್ದಾರೆ. ಈ ಮೂವರು ರಾಷ್ಟ್ರೀಯ ಚಾಂಪಿಯನ್ನರಾಗಿದ್ದರು, ವಿವಿಧ ಪ್ರಶಸ್ತಿ, ರೇಸ್‌ಗಳನ್ನು ಜಯಿಸಿದ ಹಿರಿಮೆ ಹೊಂದಿದ್ದಾರೆ.

ಉತ್ತರ ವಲಯದ ಸುತ್ತು ಚಂಡೀಗಢ, ಪಶ್ಚಿಮ ವಲಯದ ಸುತ್ತು ಬರೋಡಾ, ಪೂರ್ವ ವಲಯದ ಸುತ್ತು ಗುವಾಹಟಿ ಹಾಗೂ ನಲ್ ಸುತ್ತು ಗೋವಾದಲ್ಲಿ ನಡೆಯಲಿದೆ.

ರ‍್ಯಾಲಿ ಸ್ಪ್ರಿಂಟ್ ಒಂದು ರೋಚಕ ಮಾದರಿಯ ರೇಸ್ ಆಗಿದ್ದು, ಚಾಲಕರು ಬಹಳ ಇಷ್ಟಪಡಲಿದ್ದಾರೆ. ಪ್ರೇಕ್ಷಕರಿಗೂ ಅಪಾರ ಮನರಂಜನೆ ದೊರೆಯಲಿದೆ. ಈ ವರ್ಷ ಘಟಾನುಘಟಿ ಬೈಕರ್‌ಗಳು ಕಣದಲ್ಲಿದ್ದು, ಸ್ಪರ್ಧೆ ತೀವ್ರವಾಗಿರಲಿದೆ ಎಂದು ಚಾಂಪಿಯನ್‌ಷಿಪ್‌ನ ಆಯೋಜಕರು ಹಾಗೂ ಪ್ರಚಾರಕರು ಆಗಿರುವ ಮೋಟರ್‌ಸ್ಪೋರ್ಟ್ಸ್ ಐಎನ್‌ಸಿಯ ಜೈ ದಾಸ್ ಮೆನನ್ ಹೇಳಿದ್ದಾರೆ.

10 ಕಿಲೋ ಮೀಟರ್‌ನ ಐಎನ್‌ಆರ್‌ಸಿಎ ಸ್ಪರ್ಧೆಯು ವಿವಿಧ ವಿಭಾಗಗಳನ್ನು ಹೊಂದಿದೆ. 131 ಸಿಸಿ ಯಿಂದ 165 ಸಿಸಿ, 166 ಸಿಸಿ ಯಿಂದ 260 ಸಿಸಿ, 261 ಸಿಸಿ ಯಿಂದ 400 ಸಿಸಿ ಹಾಗೂ ಅಂತಿಮವಾಗಿ 550 ಸಿಸಿ ವರೆಗಿನ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಇದಷ್ಟೇ ಅಲ್ಲದೇ ವಿವಿಧ ವಾಹನಗಳ ವಿಭಾಗಗಳಲ್ಲೂ ಪ್ರಶಸ್ತಿಗಳಿಗಾಗಿ ಪೈಪೋಟಿ ಏರ್ಪಡಲಿದೆ. ಸ್ಕೂಟರ್ ಕ್ಲಾಸ್, ಬುಲೆಟ್ ಕ್ಲಾಸ್ ಹಾಗೂ ಮಹಿಳಾ ವಿಭಾಗವೂ ಇದೆ. 6 ಮಹಿಳೆಯರು ಸ್ಪರ್ಧೆಗಿಳಿಯಲಿದ್ದಾರೆ.  ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಬೈಕರ್‌ಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದಾರೆ.