ಬಂಬೊಲಿಮ್(ಗೋವಾ) : ಗೋಲುಗಳ ಸುರಿಮಳೆಗೈದ ಮಾಜಿ ಚಾಂಪಿಯನ್ ಬೆಂಗಳೂರು ಫುಟ್ ಬಾಲ್ ಕ್ಲಬ್ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಶುಭಾರಂಭ ಕಂಡಿತು. ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬಿಎಫ್ ಸಿ 4-2 ಗೋಲುಗಳಿಂದ ನಾರ್ಥ್‌ಈಸ್ಟ್ ಯುನೈಟೆಡ್ ತಂಡವನ್ನು ಸೋಲಿಸಿತು. ಮೊದಲಾರ್ಧದಲ್ಲಿ ಬಿಎಫ್ ಸಿ 3-2 ರಿಂದ ಮುನ್ನಡೆ ಸಾಧಿಸಿತ್ತು. ಈ ಅವಧಿಯಲ್ಲಿ ಎರಡೂ ತಂಡಗಳು ಪ್ರಬಲ ಪೈಪೋಟಿ ನಡೆಸಿದವು. ಎರಡನೇ ಅವಧಿಯಲ್ಲಿ ಪ್ರಭುತ್ವ ಸಾಧಿಸಿದ ಬಿಎಫ್ ಸಿ ಮತ್ತೊಂದು ಗೋಲು ದಾಖಲಿಸಿ ಗೆಲುವಿನ ಅಂತರ ಹಿಗ್ಗಿಸಿಕೊಂಡಿತು.
ಉಭಯ ತಂಡಗಳು ಆರಂಭಿಕ ನಿಮಿಷಗಳಿಂದಲೂ ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಬೆಂಗಳೂರು ಎಫ್ ಸಿ ತಂಡದ ಕ್ಲೀಟನ್ ಸಿಲ್ವಾ ಪಂದ್ಯದ 14ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಪ್ರತಿಯಾಗಿ ನಾರ್ಥ್‌ಈಸ್ಟ್ ತಂಡದ ಬ್ರೌನ್ (17) ಗೋಲು ಬಾರಿಸಿ ಪಂದ್ಯದಲ್ಲಿ ಸಮಬಲ ಸಾಧಿಸಲು ನೆರವಾದರು. 22ನೇ ನಿಮಿಷದಲ್ಲಿ ನಾರ್ಥ್‌ಈಸ್ಟ್ ತಂಡದ ಮಶೂರ್ ಸ್ವಗೋಲಿನ ಮೂಲಕ ಬಿಎಫ್ ಸಿಗೆ ಗೋಲುಕೊಟ್ಟರು. ಪಂದ್ಯದ ಆರಂಭಿಕ 25 ನಿಮಿಷಗಳಲ್ಲಿ ಉಭಯ ತಂಡಗಳು ತಲಾ 2 ಗೋಲು ಗಳಿಸಿದ್ದವು. ದ್ವಿತೀಯಾರ್ಧದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಬಿಎ್ಸಿ ಏಕೈಕ ಗೋಲು ಬಾರಿಸಿ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು.
ಬಿಎಫ್ ಸಿಗೆ ಮುಂದಿನ ಎದುರಾಳಿ: ಒಡಿಶಾ , ಯಾವಾಗ: ನ.24 (ಬುಧವಾರ)