ಕ್ರೀಡೆ

ಪುಟಿದೇಳುವ ತವಕದಲ್ಲಿ ಬೆಂಗಳೂರು ಎಫ್ ಸಿ

ಮಾರ್ಗೋವಾ: ಸತತ 6 ಪಂದ್ಯಗಳಲ್ಲಿ ಅಜೇಯ ಸಾಧನೆ ಬಳಿಕ ಮೊದಲ ಸೋಲನುಭವಿಸಿದ ಮಾಜಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್) ತನ್ನ 8ನೇ ಪಂದ್ಯದಲ್ಲಿ ಜೆಮ್ಶೆಡ್‌ಪುರ ಎಫ್ ಸಿ ತಂಡವನ್ನು ಸೋಮವಾರ ಎದುರಿಸಲಿದೆ. ಹಿಂದಿನ ಪಂದ್ಯದಲ್ಲಿ ಬಲಿಷ್ಠ ಎಟಿಕೆ ಮೋಹನ್ ಬಾಗನ್ ಎದುರು 0-1 ರಿಂದ ಸೋಲಿನ ರುಚಿ ಕಂಡಿರುವ ಬಿಎಫ್ ಸಿ ಪುಟಿದೇಳುವ ಭರವಸೆಯಲ್ಲಿದೆ. ಇದುವರೆಗೂ ಆಡಿರುವ 7 ಪಂದ್ಯಗಳಲ್ಲಿ ತಲಾ 3ರಲ್ಲಿ ಗೆಲುವು, ಡ್ರಾ ಕಂಡಿರುವ ಬಿಎಫ್ ಸಿ ಏಕೈಕ ಸೋಲು ಕಂಡಿದೆ. ವರ್ಷದ ಅಂತಿಮ ಪಂದ್ಯದಲ್ಲಿ ಜಯ ದಾಖಲಿಸುವ ವಿಶ್ವಾಸದಲ್ಲಿದೆ.

ಸುನೀಲ್ ಛೇಟ್ರಿ ಬಳಗ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, ತಲಾ 16 ಅಂಕ ಸಂಪಾದಿಸಿರುವ ಮುಂಬೈ ಸಿಟಿ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಮೊದಲ ಎರಡು ಸ್ಥಾನ ಹಂಚಿಕೊಂಡಿವೆ. ಅಂಕಪಟ್ಟಿಯಲ್ಲಿ ತನಗಿಂತ ಕೆಳಗಿದ್ದರೂ ಜೆಮ್ಶೆಡ್‌ಪುರ ಎಫ್ ಸಿ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಈ ಕುರಿತು ತಂಡದ ಆಟಗಾರರಿಗೆ ಬಿಎಫ್ ಸಿ ಕೋಚ್ ಕ್ರೌಡಾರ್ಟ್ ಕೂಡ ಎಚ್ಚರಿಕೆ ನೀಡಿದ್ದಾರೆ. ಅಸ್ಥಿರ ನಿರ್ವಹಣೆಯಿಂದ ಹೊರ ಬರಲು ಯತ್ನಿಸುತ್ತಿರುವ ಬಿಎಫ್ ಸಿ ತಂಡಕ್ಕೆ ಸೂಕ್ತ ಯೋಜನೆಗಳ ಅಗತ್ಯವಿದೆ. ‘ಮೂರು ಅಂಕ ಸಂಪಾದಿಸುವುದೇ ತಂಡದ ಗುರಿ. ಎದುರಾಳಿ ತಂಡದ ವಿದೇಶಿ ಆಟಗಾರರಿಂದ ಉತ್ತಮ ನಿರ್ವಹಣೆ ಬರುತ್ತಿದ್ದು, ಜೆಮ್ಶೆಡ್‌ಪುರ ತಂಡಕ್ಕೆ ಕಡಿವಾಣ ಹಾಕುವುದೇ ತಂಡದ ಗುರಿ’ ಎಂದು ಹೇಳಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್