ಮಾಲೆ(ಮಾಲ್ಡಿವ್ಸ್): ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಚಾಂಪಿಯನ್ ಬೆಂಗಳೂರು ಎಫ್ಸಿ ತಂಡ 2020 ಎಎಫ್ಸಿ ಕಪ್ ಪ್ಲೇ ಆಫ್ ಸುತ್ತಿನ ಮೊದಲ ಚರಣದ ಪಂದ್ಯದಲ್ಲಿ ಮಾಲ್ಡಿವ್ಸ್ನ ಮಾಜಿಯಾ ಆರ್ಸಿ ತಂಡವನ್ನು ಎದುರಿಸಲಿದೆ. ಎರಡು ಚರಣದ ಪಂದ್ಯ ಇದಾಗಿದ್ದು, ಜಯ ದಾಖಲಿಸುವ ತಂಡ ಎಎಫ್ಸಿ ಕಪ್ ಗುಂಪು ಹಂತಕ್ಕೆ ಅರ್ಹತೆ ಪಡೆಯಲಿದೆ.
ಮಾಲ್ಡಿವ್ಸ್ ರಾಷ್ಟ್ರೀಯ ಫುಟ್ಬಾಲ್ ಸ್ಟೇಡಿಯಂನಲ್ಲಿ ಬುಧವಾರ ಪಂದ್ಯ ನಡೆಯಲಿದ್ದು, ಬಿಎಫ್ಸಿ ಜಯದ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಭೂತಾನ್ನ ಪಾರು ಎಫ್ಸಿ ತಂಡವನ್ನು 10-1 ಗೋಲು ಸರಾಸರಿಯ ದೊಡ್ಡ ಅಂತರದಲ್ಲಿ ಮಣಿಸಿತ್ತು. ಆದರೆ, ಮಾಲ್ಡಿವ್ಸ್ನ ಅತಿಯಾದ ಬಿಸಿಲಿನ ವಾತಾವರಣದಲ್ಲಿ ಮಾಜಿಯಾ ವಿರುದ್ಧ ಗೆಲುವಿಗಾಗಿ ಬಿಎಫ್ಸಿ ದೊಡ್ಡ ಮಟ್ಟದ ಪರಿಶ್ರಮ ಹಾಕಬೇಕಿದೆ ಎಂದು ಕೋಚ್ ಕಾರ್ಲಸ್ ಕ್ಲೌಡ್ರಟ್ ಹೇಳಿದ್ದಾರೆ.
ಬಿಎಫ್ಸಿ ತಂಡ ಎಎಫ್ಸಿ ಟೂರ್ನಿಯಲ್ಲಿ ತನ್ನ ಮೊದಲ ಗೆಲುವನ್ನು ಮಾಜಿಯಾ ವಿರುದ್ಧವೇ ದಾಖಲಿಸಿತ್ತು. ‘ಮಾಜಿಯಾ ವಿರುದ್ಧದ ಗೆಲುವು ನನಗೆ ಇನ್ನೂ ನೆನಪಿದೆ. 2017ರಲ್ಲಿ ನಾವು ನ್ಯೂ ರೇಡಿಯಂಟ್ ತಂಡಕ್ಕೆ ಸೋತಿದ್ದೆವು. ಪಾರು ಎಫ್ಸಿ ವಿರುದ್ಧದ ದೊಡ್ಡ ಗೆಲುವಿನ ವಿಶ್ವಾಸ ನಮ್ಮಲ್ಲಿದೆ. ಆದರೆ, ಮಾಲ್ಡಿವ್ಸ್ನಲ್ಲಿ ಹಿಂದಿನ ಪಂದ್ಯಗಳ ಫಲಿತಾಂಶಗಳು ಲೆಕ್ಕಕ್ಕೆ ಬರುವುದಿಲ್ಲ’ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪಂದ್ಯದಲ್ಲಿ ನಾವು ಫೇವರಿಟ್ಗಳಲ್ಲ ಎಂದ ಕ್ಲೌಡ್ರಟ್, ಆ ದಿನದಲ್ಲಿ ಯಾವ ತಂಡ ಉತ್ತಮ ನಿರ್ವಹಣೆ ತೋರುತ್ತದೆಯೋ ಅದು ಗೆಲುವಿಗೆ ಅರ್ಹವಾಗಿರುತ್ತದೆ ಎಂದಿದ್ದಾರೆ. ಮಾರ್ಜನ್ ಸೆಕುಲೊವಸ್ಕಿ ತರಬೇತಿಯ ಮಾಜಿಯಾ, ಬಾಂಗ್ಲಾದೇಶದ ಚಾಂಪಿಯನ್ ತಂಡ ಅಭಹಾನಿ ಢಾಕಾವವನ್ನು ಮಣಿಸಿ ಪ್ಲೇಆಫ್ ಹಂತಕ್ಕೆ
ಅರ್ಹತೆ ಪಡೆದಿದೆ.
ಪಂದ್ಯ ಆರಂಭ: ಸಂಜೆ 4.30
ಸುನೀಲ್ ಛೇಟ್ರಿ ಇಲ್ಲ
ಮಾಂಸಖಂಡದ ಗಾಯಕ್ಕೆ ತುತ್ತಾಗಿರುವ ಸುನೀಲ್ ಛೇಟ್ರಿ ಈ ಪಂದ್ಯಕ್ಕೆ ಲಭ್ಯರಿಲ್ಲ. ಮಿಡ್ಫೀಲ್ಡರ್ ಸುರೇಶ್ ವಾಂಗ್ಜಾಮ್ ಪಾರು ಎಫ್ಸಿ ವಿರುದ್ಧದ ಎರಡೂ ಚರಣದ ಪಂದ್ಯದಲ್ಲಿ ಹಳದಿ ಕಾರ್ಡ್ ಪಡೆದಿರುವ ಕಾರಣ ಈ ಪಂದ್ಯದಲ್ಲಿ ಆಡುವಂತಿಲ್ಲ.