ಕ್ರೀಡೆ

ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಸೋಲಿನ ಆರಂಭ

ಅಹಮದಾಬಾದ್​: ಮೊದಲಾರ್ಧದ ಮುನ್ನಡೆಯನ್ನು ಬಿಟ್ಟುಕೊಟ್ಟ ಬೆಂಗಳೂರು ಬುಲ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಸೋಲಿನ ಆರಂಭ ಕಂಡಿದೆ. ಟ್ರಾನ್ಸ್​ಸ್ಟೇಡಿಯಾದಲ್ಲಿ ಭಾನುವಾರ ಟೂರ್ನಿಯ ಮೊದಲ ಪಂದ್ಯ ಆಡಿದ ಬೆಂಗಳೂರು ಬುಲ್ಸ್​ ತಂಡ ಆತಿಥೇಯ ಗುಜರಾತ್​ ಜೈಂಟ್ಸ್​ ಎದುರು 31-34 ಅಂತರದಿಂದ ವೀರೋಚಿತ ಸೋಲು ಅನುಭವಿಸಿತು.

ಮೊದಲಾರ್ಧದಲ್ಲಿ 20&14ರಿಂದ ಮುನ್ನಡೆ ಸಾಧಿಸಿದ್ದ ಬುಲ್ಸ್​, ದ್ವೀತಿಯಾರ್ಧದಲ್ಲಿ ಆಲೌಟ್​ ಬಲೆಗೆ ಬಿದ್ದು ಹಿನ್ನಡೆ ಕಂಡಿತು. ಪಂದ್ಯ ಮುಕ್ತಾಯಕ್ಕೆ 3 ನಿಮಿಷಗಳಿರುವಾಗ ಮತ್ತೆ ಮುನ್ನಡೆ ಸಾಧಿಸಿದರೂ, ಬುಲ್ಸ್​ ಅದನ್ನು ಉಳಿಸಿಕೊಳ್ಳಲು ಶಕ್ತವಾಗಲಿಲ್ಲ. ಬುಲ್ಸ್​ ಪರ ರೈಡರ್​ಗಳಾದ ಭರತ್​ 7, ವಿಕಾಸ್​ ಕಂಡೋಲ 6, ನೀರಜ್​ ನರ್ವಾಲ್​ 4 ಅಂಕ ಗಳಿಸಿದರು.

ತಲೈವಾಸ್​ಗೆ ಜಯ: ರೈಡರ್​ ಅಜಿಂಕ್ಯ ಪವಾರ್​ (21 ಅಂಕ) ಭರ್ಜರಿ ನಿರ್ವಹಣೆಯ ಬಲದಿಂದ ತಮಿಳ್​ ತಲೈವಾಸ್​ ತಂಡ ದಿನದ ಮೊದಲ ಪಂದ್ಯದಲ್ಲಿ ದಬಾಂಗ್​ ದೆಹಲಿ ವಿರುದ್ಧ 42&31 ಅಂತರದಿಂದ ಗೆಲುವು ದಾಖಲಿಸಿತು. ತಲೈವಾಸ್​ ಮೊದಲಾರ್ಧದಲ್ಲೇ 18-14ರಿಂದ ಮುನ್ನಡೆ ಸಾಧಿಸಿತ್ತು. ಅಜಿಂಕ್ಯ 14 ಯಶಸ್ವಿ ರೈಡಿಂಗ್​ಗಳೊಂದಿಗೆ ಮಿಂಚಿದರು. ದೆಹಲಿ ಪರ ನಾಯಕ ನವೀನ್​ ಕುಮಾರ್​ (14) ಹೋರಾಟ ವ್ಯರ್ಥವೆನಿಸಿತು.