ಕ್ರೀಡೆ

ಬೆಂಗಳೂರು ಬುಲ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಯುಪಿ ಯೋಧಾ

ಬೆಂಗಳೂರು: ಸತತ 6 ಪಂದ್ಯಗಳಲ್ಲಿ ಅಜೇಯ ಸಾಧನೆ ಮಾಡಿದ್ದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡದ ಗೆಲುವಿನ ಓಟಕ್ಕೆ ಯುಪಿ ಯೋಧಾ ಬ್ರೇಕ್ ಹಾಕಿತು. ಭಾನುವಾರ ನಡೆದ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಟ್ಯಾಕಲಿಂಗ್ ಹಾಗೂ ರೈಡಿಂಗ್ ಎರಡೂ ವಿಭಾಗಗಳಲ್ಲೂ ವೈಲ್ಯ ಅನುಭವಿಸಿದ ಬೆಂಗಳೂರು ಬುಲ್ಸ್ ತಂಡ 27-42 ಅಂಕಗಳಿಂದ ಯುಪಿ ಯೋಧಾ ತಂಡಕ್ಕೆ ಶರಣಾಯಿತು. ಲೀಗ್‌ನಲ್ಲಿ ಎರಡನೇ ಬಾರಿ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದ ಬುಲ್ಸ್ ತಂಡ ಆಘಾತ ಕಂಡಿತು. ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ತಂಡಕ್ಕೆ ಶರಣಾಗಿದ್ದ ಬುಲ್ಸ್ ತಂಡ ಬಳಿಕ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಜಯ ಹಾಗೂ ಒಂದು ಟೈ ಸಾಧಿಸಿತ್ತು. ಈ ಸೋಲಿನೊಂದಿಗೆ ಬುಲ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ತಪ್ಪಿಸಿಕೊಂಡಿತು.

* ದುಬಾರಿಯಾದ ಸೂಪರ್ ಟ್ಯಾಕಲ್ಸ್

ಎರಡು ತಂಡಗಳು ಆರಂಭಿಕ ಹಂತದಲ್ಲಿ ಸಮಬಲ ಹೋರಾಟ ತೋರಿದರೂ ಬುಲ್ಸ್ ತಂಡ ಮುನ್ನಡೆ ಕಾಯ್ದುಕೊಂಡಿತು. ಮೊದಲಾರ್ಧದ ಕಡೇ ಹಂತದಲ್ಲಿ ಯುಪಿ ಯೋಧಾ ತಂಡ ಕೇವಲ 2 ಆಟಗಾರರನ್ನು ಹೊಂದಿದ್ದರೂ ಸತತ ಮೂರು ಬಾರಿ ಸೂಪರ್ ಟ್ಯಾಕಲ್‌ಗೆ ಒಳಗಾದ ಬುಲ್ಸ್ ತಂಡ ಹಿನ್ನಡೆ ಅನುಭವಿಸಿತು. 5 ಅಂಕಗಳ ಮುನ್ನಡೆ ಹೊಂದಿದ್ದ ಬೆಂಗಳೂರು ತಂಡ ಏಕಾಏಕಿ 13-15 ರಿಂದ ಹಿನ್ನಡೆ ಕಂಡಿತು. ಬಳಿಕ ಯುಪಿ ಯೋಧಾ ಆಟಗಾರರು ಪಂದ್ಯದಲ್ಲಿ ಮತ್ತಷ್ಟು ಬಿಗಿ ಹಿಡಿತ ಸಾಧಿಸಿದ ಲವಾಗಿ ಬುಲ್ಸ್ ಮೊದಲಾರ್ಧದಲ್ಲಿ 14-19 ರಿಂದ ಹಿನ್ನಡೆ ಕಂಡಿತು. ಏಕೈಕ ಆಟಗಾರನೊಂದಿಗೆ ಎರಡನೇ ಸರದಿ ಆರಂಭಿಸಿದ ಬುಲ್ಸ್ 21ನೇ ನಿಮಿಷದಲ್ಲೇ ಆಲೌಟ್ ಆಗುವ ಮೂಲಕ 14-22 ರಿಂದ ಹಿನ್ನಡೆ ಕಂಡಿತು. ಬಳಿಕ ಪಂದ್ಯದಲ್ಲಿ ಅಬ್ಬರದ ನಿರ್ವಹಣೆ ತೋರಿದ ಯುಪಿ ಆಟಗಾರರು ಹಿಡಿತ ಸಾಧಿಸಿದರು.

* ಪವನ್ ಶೇರಾವತ್‌ಗೆ ಕಡಿವಾಣ

ಬುಲ್ಸ್ ತಂಡದ ನಾಯಕ ಪವನ್ ಶೇರಾವತ್‌ಗೆ ಸತತವಾಗಿ ಕಡಿವಾಣ ಹಾಕಿದ ಯುಪಿ ಆಟಗಾರರು ಮೇಲುಗೈ ಸಾಧಿಸಿದರು. ಆರಂಭಿಕ ಅವಧಿಯಲ್ಲಿ ಪವನ್ ಸುಮಾರು 12 ನಿಮಿಷಗಳ ಕಾಲ ಕೋರ್ಟ್‌ನಿಂದ ಹೊರಗುಳಿದಿದ್ದು ತಂಡಕ್ಕೆ ದುಬಾರಿಯಾಯಿತು. ಅಲ್ಲದೆ, 17 ಬಾರಿ ರೈಡಿಂಗ್‌ಗೆ ತೆರಳಿದರೂ ಬುಲ್ಸ್ ನಾಯಕ ಕೇವಲ ಒಂದು ಬೋನಸ್ ಸಹಿತ 5 ಅಂಕಗಳನ್ನಷ್ಟೇ ಗಳಿಸಲು ಶಕ್ತರಾದರು. ಬುಲ್ಸ್ ಪರ ರೈಡರ್ ಭರತ್ ಸೋಲಿನಲ್ಲೂ ಗಮನಸೆಳೆದರು. ಯುಪಿ ಯೋಧಾ ತಂಡದ ಪರ ಶ್ರೀಕಾಂತ್ ಜಾಧವ್ (15ಅಂಕ) ಆಲ್ರೌಂಡ್ ನಿರ್ವಹಣೆ ಮೂಲಕ ಗಮನಸೆಳೆದರು.

* ಬೆಂಗಾಲ್‌ಗೆ 5ನೇ ಸೋಲು

ಪುಣೇರಿ ಪಲ್ಟಾನ್ ಆಟಗಾರರ ಅಬ್ಬರದ ಎದುರು ಸಂಪೂರ್ಣ ಮಂಕಾದ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ ತಂಡ ಲೀಗ್‌ನಲ್ಲಿ 5ನೇ ಸೋಲು ಕಂಡಿತು. ದಿನದ ಮೊದಲ ಪಂದ್ಯದಲ್ಲಿ ಬೆಂಗಾಲ್ ತಂಡ 27-39 ಅಂಕಗಳಿಂದ ಪುಣೆ ತಂಡಕ್ಕೆ ಶರಣಾಯಿತು. ಎರಡೂ ಅವಧಿಯಾಟದಲ್ಲಿ ತಲಾ ಒಮ್ಮೆ ಬೆಂಗಾಲ್ ತಂಡವನ್ನು ಆಲೌಟ್ ಮಾಡುವ ಮೂಲಕ ಪುಣೆ ತಂಡ ಮೇಲುಗೈ ಸಾಧಿಸಿತು. ಪುಣೆ ತಂಡದ ರೈಡರ್ ಅಸ್ಲಾಮ್ ಇನಾಂದರ್ (17) ಭರ್ಜರಿ ನಿರ್ವಹಣೆ ತೋರಿದರು. ಬೆಂಗಾಲ್ ತಂಡ ಲೀಗ್‌ನಲ್ಲಿ ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಜಯ, 5 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯಗಳು:

ತಮಿಳ್ ತಲೈವಾಸ್-ಹರಿಯಾಣ ಸ್ಟೀಲರ್ಸ್‌

ಆರಂಭ: ರಾತ್ರಿ 7.30

ಜೈಪುರ ಪಿಂಕ್‌ಪ್ಯಾಂಥರ್ಸ್‌-ದಬಾಂಗ್ ಡೆಲ್ಲಿ

ಆರಂಭ: ರಾತ್ರಿ 8.30