ಬೆಂಗಳೂರು : ಆರಂಭಿಕ ಹಿನ್ನಡೆ ನಡುವೆಯೂ ತಿರುಗೇಟು ನೀಡಲು ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ 2018ರ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಶುಭಾರಂಭ ಕಾಣಲು ವಿಫಲವಾಯಿತು. ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ನಿರೀಕ್ಷಿ ನಿರ್ವಹಣೆ ತೋರಲು ವಿಫಲವಾದ ಬುಲ್ಸ್ ತಂಡ 30-46 ಅಂಕಗಳಿಂದ ಯು ಮುಂಬಾ ಎದುರು ನಿರಾಸೆ ಅನುಭವಿಸಿತು. ವೈಟ್ಫೀಲ್ಡ್ನಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಲೀಗ್ಗೆ ಚಾಲನೆ ನೀಡಲಾಯಿತು. ಸ್ಟಾರ್ ರೈಡರ್ ಅಭಿಷೇಕ್ (19 ಅಂಕ) ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪವನ್ಗೆ ಕಡಿವಾಣ
ಬುಲ್ಸ್ ತಂಡದ ಸ್ಟಾರ್ ರೈಡರ್ ಪವನ್ ಶೇರಾವತ್ಗೆ (12 ಅಂಕ) ನಿರ್ಣಾಯಕ ಹಂತದಲ್ಲಿ ಮುಂಬೈ ರಣಾತ್ಮಕ ಪಡೆ ಕಡಿವಾಣ ಹಾಕಿತು. ಮೊದಲ ರೈಡಿಂಗ್ನಲ್ಲೇ ಪವನ್ಗೆ ಮುಂಬೈ ಆಟಗಾರರ ಬಲೆಹಾಕಿದರು. ಇದರ ಫಲವಾಗಿ ಮುಂಬೈ ತಂಡ 7ನೇ ನಿಮಿಷದಲ್ಲೇ ಬುಲ್ಸ್ ತಂಡವನ್ನು ಆಲೌಟ್ ಖೆಡ್ಡಾಗೆ ಬೀಳಿಸಿ 11-5 ರಿಂದ ಮುನ್ನಡೆ ಸಾಧಿಸಿತು. ಬಳಿಕ ಬುಲ್ಸ್ ತಂಡದ ಚಂದ್ರನ್ ರಂಜಿತ್ (13ಅಂಕ) ಭರ್ಜರಿ ರೈಡಿಂಗ್ ನಡೆಸಿ ಮುಂಬೈ ತಂಡಕ್ಕೆ ತಿರುಗೇಟು ನೀಡುವ ಸೂಚನೆ ನೀಡಿದರು. ಚಂದ್ರನ್ 12ನೇ ನಿಮಿಷದಲ್ಲಿ 2 ಹಾಗೂ 14ನೇ ನಿಮಿಷದಲ್ಲಿ 3 ಪಾಯಿಂಟ್ಸ್ ತಂದ ಲವಾಗಿ ಅಂಕಗಳ ಅಂತರವನ್ನು 16-17ಕ್ಕೆ ಇಳಿಸಿದರು. ಈ ವೇಳೆ ಮುಂಬೈ ಅಂಕಣದಲ್ಲಿ ಅಭಿಷೇಕ್ ಏಕೈಕ ಆಟಗಾರನಾಗಿ ಉಳಿದರು. ರೈಡಿಂಗ್ಗೆ ಆಗಮಿಸಿದ ಅಭಿಷೇಕ್ಗೆ ಕಡಿವಾಣ ಹೇರಲು ವಿಫಲವಾದ ಬುಲ್ಸ್ ತಂಡ ಮೂರು ಅಂಕಬಿಟ್ಟುಕೊಟ್ಟಿತು. ಜತೆಗೆ ಮುಂಬೈ ತಂಡವನ್ನು ಆಲೌಟ್ ಮಾಡುವ ಅವಕಾಶ ತಪ್ಪಿಸಿಕೊಂಡಿತು. ಮೊದಲಾರ್ಧದ ಕಡೇ ನಿಮಿಷಗಳಲ್ಲಿ ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತ ಬುಲ್ಸ್ ತಂಡ 17-24 ರಿಂದ ಹಿನ್ನಡೆ ಕಂಡಿತು.
ಮುಂಬೈ ಅಬ್ಬರದ ಆಟ
ದ್ವೀತಿಯಾರ್ಧದಲ್ಲೂ ಮುಂಬೈ ಅಬ್ಬರದ ನಿರ್ವಹಣೆ ಮುಂದುವರಿಸಿದರೆ ಬುಲ್ಸ್ ತಂಡ ಕನಿಷ್ಠ ಪುಟಿದೇಳಲು ವಿಲವಾಯಿತು. ಇಬ್ಬರು ಆಟಗಾರರೊಂದಿಗೆ ದ್ವೀತಿಯಾರ್ಧ ಆರಂಭಿಸಿದ ಬುಲ್ಸ್ ತಂಡ 22ನೇ ನಿಮಿಷದಲ್ಲೇ ಎರಡನೇ ಬಾರಿ ಆಲೌಟ್ ಆಯಿತು. ಬಳಿಕ ಮುಂಬೈ ತಂಡದ ಅಬ್ಬರದ ಎದುರು ಬುಲ್ಸ್ ತಂಡ ಕನಿಷ್ಠ ಚೇತರಿಕೆ ಕಾಣಲು ವಿಫಲವಾಯಿತು. 38ನೇ ನಿಮಿಷದಲ್ಲಿ ಮೂರನೇ ಬಾರಿಗೆ ಬುಲ್ಸ್ ತಂಡವನ್ನು ಆಲೌಟ್ ಮಾಡಿದ ಮುಂಬೈ ತಂಡ ಗೆಲುವಿನ ಅಂತರ ಹಿಗ್ಗಿಸಿಕೊಂಡಿತು. ಅಭಿಷೇಕ್ ಸಿಂಗ್ ಆಕರ್ಷಕ ರೈಡಿಂಗ್ ಮೂಲಕ ಗಮನಸೆಳೆದರು.