ಕ್ರೀಡೆ

ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ಬೆಂಗಳೂರು ಬುಲ್ಸ್​

ಪಂಚಕುಲ: ಸುಶೀಲ್‌ (22 ಅಂಕ) ಅಮೋಘ ಆಟದ ಜತೆಗೆ ಮೂರು ಬಾರಿಯ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಆಲೌಟ್‌ ಮಾಡಿದ ಬೆಂಗಳೂರು ಬುಲ್ಸ್‌ 14 ಅಂಕಗಳಿಂದ ಗೆದ್ದು, ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. ಈ ಫಲಿತಾಂಶದೊಂದಿಗೆ ಒಟ್ಟಾರೆ 53 ಅಂಕ ಗಳಿಸಿದ ಬೆಂಗಳೂರು ಬುಲ್ಸ್‌ 12 ತಂಡಗಳ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆಯಿತು. ಅತ್ತ ಹರಿಯಾಣ ಐದನೇ ಸ್ಥಾನದೊಂದಿಗೆ ಪ್ಲೇಆಫ್‌ ಹಂತದಲ್ಲಿ ಸೆಣಸಾಟ ನಡೆಸಲು ವೇದಿಕೆ ಸಿದ್ದಪಡಿಸಿಕೊಂಡಿತು.

ತೌವ್‌ ದೇವಿಲಾಲ್‌ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ಪಂದ್ಯದಲ್ಲಿ ಬುಲ್ಸ್‌ 53-39 ಅಂಕಗಳಿಂದ ಸ್ಟೀಲರ್ಸ್‌ಗೆ ಆಘಾತ ನೀಡಿತು. ಸ್ಟೀಲರ್ಸ್‌ ಪರ ತೇಜಸ್‌ (11) ಗರಿಷ್ಠ ಅಂಕ ಗಳಿಸಿದರೆ, ಬುಲ್ಸ್‌ ಪರ ಸುಶೀಲ್‌ 22 ಅಂಕ ಗಳಿಸಿ ಜಯದಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಮುನ್ನಡೆಯ ಗಳಿಸುವ ವಿಶ್ವಾಸದೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಇತ್ತಂಡಗಳು ರಕ್ಷ ಣಾತ್ಮಕ ಆಟಕ್ಕೆ ಒತ್ತು ನೀಡಿದವು. ಆದಾಗ್ಯೂ 26-25ರಲ್ಲಿ ಮೇಲುಗೈ ಸಾಧಿಸಿದ ಹರಿಯಾಣ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಗುರಿಯತ್ತ ಮುನ್ನುಗ್ಗಿತು. 27ನೇ ನಿಮಿಷದಲ್ಲಿ ಹರಿಯಾಣ ತಂಡವನ್ನು ಆಲೌಟ್‌ ಮಾಡಿದ ಬುಲ್ಸ್‌ ಆಟಗಾರರು 32-29ರಲ್ಲಿ ಮೇಲುಗೈ ಸಾಧಿಸಿದರು. ನಂತರ ಉಭಯ ತಂಡಗಳು ಮುನ್ನಡೆ ಪಡೆಯುವ ಹಾದಿಯಲ್ಲಿ ಹಾವು-ಏಣಿ ಆಟವಾಡಿದವು.

ಪಂದ್ಯ ಮುಕ್ತಾಯಕ್ಕೆ ಹತ್ತು ನಿಮಿಷಗಳು ಬಾಕಿ ಇರುವಾಗ 36-33ರಲ್ಲಿ ಮೇಲುಗೈ ಸಾಧಿಸಿದ ಬುಲ್ಸ್‌, ಸ್ಟೀಲರ್ಸ್‌ ಮೇಲೆ ಒತ್ತಡ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿತು. ಅಂತೆಯೇ ರೇಡಿಂಗ್‌ ಮತ್ತು ಟ್ಯಾಕಲ್‌ ಎರಡರಲ್ಲೂ ಸಮಯೋಚಿತ ಆಟವಾಡಿದ ಬೆಂಗಳೂರು ತಂಡ 35ನೇ ನಿಮಿಷ ಮುಕ್ತಾಯದೊಳಗೆ ತಂಡದ ಅಂತರವನ್ನು 40-36ಕ್ಕೆ ವಿಸ್ತರಿಸಿಕೊಂಡಿತು.

ಪಂದ್ಯ ಕೊನೆಗೊಳ್ಳಲು ಕೇವಲ 2 ನಿಮಿಷಗಳಿರುವಾಗ ಮತ್ತೊಮ್ಮೆ ಸಾಂಘಿಕ ಹೋರಾಟ ನೀಡಿದ ಬೆಂಗಳೂರು ಹರಿಯಾಣ ತಂಡವನ್ನು ಮೂರನೇ ಬಾರಿ ಆಲೌಟ್‌ ಮಾಡಿತ್ತಲ್ಲದೆ, ಗೆಲುವನ್ನು ಖಚಿತಪಡಿಸಿಕೊಂಡಿತು. ಪಂದ್ಯದಲ್ಲಿ 1 ಅಂಕ ಗಳಿಸಿದ ವಿಕಾಸ್‌ ಕಂಡೋಲಾ ಲೀಗ್‌ನಲ್ಲಿ 800 ರೈಡಿಂಗ್‌ ಪಾಯಿಂಟ್ಸ್‌ ಕಲೆಹಾಕಿದ ಸಾಧನೆ ಮಾಡಿದರು.

ಸಮಬಲದ ಹೋರಾಟ ನೀಡಿದ ಬೆಂಗಳೂರು ಬುಲ್ಸ್‌ ಮತ್ತು ಹರಿಯಾಣ ಸ್ಟೀಲರ್ಸ್‌ ಪಂದ್ಯದ ಮೊದಲಾರ್ಧಕ್ಕೆ 24-24 ಅಂಕಗಳಿಂದ ಸಮಬಲದ ಹೋರಾಟ ನೀಡಿದವು. ತಲಾ ಒಮ್ಮೆ ಆಲೌಟ್‌ ಮಾಡಿದ ಉಭಯ ತಂಡಗಳು, ಟ್ಯಾಕಲ್‌ ಮತ್ತು ರೇಡಿಂಗ್‌ನಲ್ಲಿ ಬಹುತೇಕ ಜಿದ್ದಾಜಿದ್ದಿನ ಸೆಣಸಾಟ ಮಾಡಿದವು. ಹ್ಯಾಟ್ರಿಕ್‌ ಸೋಲಿನಿಂದ ಹೊರಬರುವ ಹಾಗೂ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸುವ ಇರಾದೆಯಲ್ಲಿ ಆಡಿದ ಬೆಂಗಳೂರು ಬುಲ್ಸ್‌ ಪರ ಸುಶೀಲ್‌ ಸೂಪರ್‌ 10 ಸಾಹಸ ಮಾಡಿದರೆ, ವಿಶಾಲ್‌ ತಾಟೆ ಮತ್ತು ತೇಜಸ್‌ ಹರಿಯಾಣ ತಂಡದ ಹೋರಾಟಕ್ಕೆ ಬಲ ತಂದರು.

ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ಪುಣೇರಿ ಪಲ್ಟನ್‌ ಮತ್ತು ಜೈಪುರ ಪಿಂಕ್‌ಪ್ಯಾಂಥರ್ಸ್‌ ತಂಡಗಳು ಸೆಮಿಫೈನಲ್ಸ್‌ಗೆ ನೇರ ಅರ್ಹತೆ ಗಳಿಸಿದರೆ, ದಬಾಂಗ್‌ ದಿಲ್ಲಿ, ಗುಜರಾತ್‌ ಜಯಂಟ್ಸ್‌ , ಹರಿಯಾಣ ಸ್ಟೀಲಸ್‌ ಮತ್ತು ಪಟನಾ ಪೈರೇಟ್ಸ್‌ ತಂಡಗಳು ಪ್ಲೇಆಫ್‌ ಹಂತದಲ್ಲಿ ಹೋರಾಟ ನಡೆಸಲಿವೆ.