ಕ್ರೀಡೆ

ಐಸಿಸಿ ಟೂರ್ನಿಯಲ್ಲಿ ವಿಶಿಷ್ಠ ದಾಖಲೆ ಬರೆದ ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ!

ಲಾಹೋರ್: ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ (108 ರನ್, 101 ಎಸೆತ, 13 ಬೌಂಡರಿ, 1 ಸಿಕ್ಸರ್ ಹಾಗೂ 20ಕ್ಕೆ 1 ವಿಕೆಟ್) ಸಿಡಿಸಿದ 5ನೇ ಶತಕ ಹಾಗೂ ಅನುಭವಿ ಕೇನ್ ವಿಲಿಯಮ್ಸನ್ (102 ರನ್, 94 ಎಸೆತ ,10 ಬೌಂಡರಿ, 2 ಸಿಕ್ಸರ್) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾರಿಸಿದ 48ನೇ ಸೆಂಚುರಿ ನೆರವಿನಿಂದ ರನ್‌ಮಳೆ ಹರಿಸಿದ ನ್ಯೂಜಿಲೆಂಡ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಎದುರು 50 ರನ್‌ಗಳ ಗೆಲುವು ದಾಖಲಿಸಿ, ಮೂರನೇ ಬಾರಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಭಾನುವಾರ ಹಾಲಿ ರನ್ನರ್ ಅಪ್ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕಿವೀಸ್, ಸಾಧಾರಣ ಆರಂಭದ ನಡುವೆಯೂ 25 ವರ್ಷದ ರಚಿನ್ ರವೀಂದ್ರ ಹಾಗೂ 34 ವರ್ಷದ ಕೇನ್ ವಿಲಿಯಮ್ಸನ್ ನಡೆಸಿದ ಭರ್ಜರಿ ಜತೆಯಾಟದ ಜತೆಗೆ ಸ್ಲಾಗ್ ಓವರ್‌ಗಳಲ್ಲಿ ಡೆರಿಲ್ ಮಿಚೆಲ್ (49), ಗ್ಲೆನ್ ಫಿಲಿಪ್ಸ್ (49*) ಬಿರುಸಿನಾಟದ ಬಲದಿಂದ 6 ವಿಕೆಟ್‌ಗೆ 362 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ನಾಯಕ ಟೆಂಬಾ ಬವುಮಾ (56 ರನ್, 71 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ರಸ್ಸಿ ವ್ಯಾನ್ ಡರ್ ಡುಸೆನ್ (69 ರನ್, 66 ಎಸೆತ, 4 ಬೌಂಡರಿ, 2 ಸಿಕ್ಸರ್) ಹರಿಣಗಳ ಹೋರಾಟ ಜೀವಂತವಿರಿಸಿದರು. ನಂತರ ಮಿಚೆಲ್ ಸ್ಯಾಂಟ್ನರ್ (29ಕ್ಕೆ 3) ಸಹಿತ ಸ್ಪಿನ್ನರ್‌ಗಳ ದಾಳಿಗೆ ಕುಸಿದ ದ.ಆಫ್ರಿಕಾ ಅಂತಿಮವಾಗಿ 9 ವಿಕೆಟ್‌ಗೆ 312 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ನ್ಯೂಜಿಲೆಂಡ್ ತಂಡ 16 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರಿದ ಸಾಧನೆ ಮಾಡಿತು.

ನ್ಯೂಜಿಲೆಂಡ್: 6 ವಿಕೆಟ್‌ಗೆ 362 (ವಿಲ್ ಯಂಗ್ 21, ರಚಿನ್ ರವೀಂದ್ರ 108, ವಿಲಿಯಮ್ಸನ್ 102, ಡೆರಿಲ್ ಮಿಚೆಲ್ 49, ಲಾಥಮ್ 4, ಫಿಲಿಪ್ಸ್ 49*, ಬ್ರೇಸ್‌ವೆಲ್ 16, ಸ್ಯಾಂಟ್ನರ್ 2*, ಎನ್‌ಗಿಡಿ 72ಕ್ಕೆ 3, ರಬಾಡ 70ಕ್ಕೆ 2). ದಕ್ಷಿಣ ಆಫ್ರಿಕಾ: 9 ವಿಕೆಟ್‌ಗೆ 312 (ರಿಕೆಲ್‌ಟನ್ 17, ಬವುಮಾ 56, ವ್ಯಾನ್ ಡರ್ ಡುಸೆನ್ 69, ಮಾರ್ಕ್ರಮ್ 31, ಕ್ಲಾಸೆನ್ 3, ಮಿಲ್ಲರ್ 100*, ಮುಲ್ಡರ್ 8, ಜಾನ್ಸೆನ್ 8, ಕೇಶವ 1, ರಬಾಡ 16, ಸ್ಯಾಂಟ್ನರ್ 43ಕ್ಕೆ 3, ಫಿಲಿಪ್ಸ್ 27ಕ್ಕೆ 2).

362: ಚಾಂಪಿಯನ್ಸ್ ಟ್ರೋಫಿಯಲ್ಲಿ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ. ಇಂಗ್ಲೆಂಡ್ ಎದುರು ಚೇಸಿಂಗ್‌ನಲ್ಲಿ ಆಸ್ಟ್ರೇಲಿಯಾ 356 ರನ್‌ಗಳಿಸಿದ್ದು ಹಿಂದಿನ ಗರಿಷ್ಠ.

5: ರಚಿನ್ ರವೀಂದ್ರ (13 ಇನಿಂಗ್ಸ್) ಇದುವರೆಗೆ ಸಿಡಿಸಿರುವ 5 ಏಕದಿನ ಶತಕಗಳೂ ಐಸಿಸಿ ಟೂರ್ನಿಗಳಲ್ಲೇ ದಾಖಲಿಸಿರುವುದು ವಿಶೇಷ. 2023ರ ಏಕದಿನ ವಿಶ್ವಕಪ್‌ನಲ್ಲಿ 3 ಹಾಗೂ ಹಾಲಿ ಟೂರ್ನಿಯಲ್ಲಿ 2 ಸೆಂಚುರಿ ಗಳಿಸಿದ್ದಾರೆ.

5. ಐಸಿಸಿ ಟೂರ್ನಿಯ ನಾಕೌಟ್ ಪಂದ್ಯದ ಇನಿಂಗ್ಸ್‌ನಲ್ಲಿ ಇಬ್ಬರು ಶತಕ ಗಳಿಸಿದ ಐದನೇ ದೃಷ್ಟಾಂತ ಇದಾಗಿದೆ. ವ್ಯಾಟ್ಸನ್-ಪಾಂಟಿಂಗ್ (2009), ದಿಲ್ಶಾನ್-ತರಂಗ (2011), ಟ್ರಾವಿಸ್ ಹೆಡ್-ಸ್ಮಿತ್ (2023), ವಿರಾಟ್ ಕೊಹ್ಲಿ-ಶ್ರೇಯಸ್ ಅಯ್ಯರ್ (2023) ಹಿಂದಿನ ಸಾಧಕರು.

48. ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಸಕ್ರಿಯ ಆಟಗಾರರ ಪಟ್ಟಿಯಲ್ಲಿ ಸ್ಟೀವನ್ ಸ್ಮಿತ್ (48) ಸಾಧನೆ ಸರಿಗಟ್ಟಿದರು. ಕೊಹ್ಲಿ (82), ರೂಟ್ (53), ರೋಹಿತ್ ಶರ್ಮ (49) ಮೊದಲ 3 ಸ್ಥಾನದಲ್ಲಿದ್ದಾರೆ.