ಕ್ರೀಡೆ

ವಾರಿಯರ್ಸ್‌-ಯೋಧಾಸ್ ಪಂದ್ಯ ರೋಚಕ ಟೈ: ಸುರೇಂದರ್ ಗಿಲ್ ಹೋರಾಟ ವ್ಯರ್ಥ

ಪುಣೆ: ನಿತಿನ್ ಕುಮಾರ್ (10) ನಡೆಸಿದ 7 ಯಶಸ್ವಿ ರೈಡಿಂಗ್‌ಗಳ ಬಲದಿಂದ ಆರಂಭಿಕ ಹಿನ್ನಡೆಯಿಂದ ಕಂಬ್ಯಾಕ್ ಮಾಡಿದ ಬೆಂಗಾಲ್ ವಾರಿಯರ್ಸ್‌ ತಂಡ ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಯುಪಿ ಯೋಧಾಸ್ ಎದುರು 38-38 ರೋಚಕ ಟೈ ಸಾಧಿಸಿದೆ. ಇದರೊಂದಿಗೆ ಬೆಂಗಾಲ್ ವಾರಿಯರ್ಸ್‌ ತಂಡ ಟೂರ್ನಿಯಲ್ಲಿ 2ನೇ ಬಾರಿಗೆ ಟೈ ಸಾಧಿಸಿದಂತಾಗಿದೆ.

ಛತ್ರಪತಿ ಸ್ಪೋಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಪುಣೆ ಚರಣದ ಸೋಮವಾರದ ಪಂದ್ಯದಲ್ಲಿ ಯುಪಿ ಯೋಧಾಸ್ ತಂಡ ಮೊದಲಾರ್ಧದ ಮುಕ್ತಾಯಕ್ಕೆ 18-14 ರಿಂದ ಮೇಲುಗೈ ಸಾಧಿಸಿತು. ಮೊದಲ 20 ನಿಮಿಷ ಎಚ್ಚರಿಕೆಯ ಆಟವಾಡಿದ ಉಭಯ ತಂಡಗಳು ಸಮಬಲ ಹೋರಾಟ ನಡೆಸಿದವು. ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿದ ಬೆಂಗಾಲ್ ಪರ ನಾಯಕ ಮಣಿಂದರ್ ಸಿಂಗ್ (9) ಹಾಗೂ ಶ್ರೀಕಾಂತ್ ಜಾಧವ್ (6) ಅಂಕ ಕಲೆಹಾಕಿದರು. ಯುಪಿ ಯೋಧಾಸ್ ಪರ ಸುರೇಂದರ್ ಗಿಲ್ ಏಕಾಂಗಿಯಾಗಿ 18 ಅಂಕ ಕಲೆಹಾಕಿದರು ಜಯದಕ್ಕಲಿಲ್ಲ.