ಓವಲ್: ನಿವೃತ್ತಿಯನ್ನು ಹಿಂಪಡೆದು 14 ತಿಂಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಮರಳಿರುವ ಆಲ್ರೌಂಡರ್ ಬೆನ್ ಸ್ಟೋಕ್ಸ್ (182 ರನ್, 124 ಎಸೆತ, 15 ಬೌಂಡರಿ, 9 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್‌ಗಳಿಸಿದ ಬ್ಯಾಟರ್ ಎನಿಸಿದ್ದಾರೆ. ಜೇಸನ್ ರಾಯ್ (180) ಅವರ ದಾಖಲೆಯನ್ನು ಮುರಿದಿದ್ದಾರೆ. ಇದರೊಂದಿಗೆ 2023ರಲ್ಲಿ ಅತಿಹೆಚ್ಚು ರನ್‌ಗಳಿಸಿದ 2ನೇ ಬ್ಯಾಟರ್ ಎನಿಸಿದ್ದು, ಭಾರತದ ಶುಭಮಾನ್ ಗಿಲ್ (208) ಮೊದಲಿಗ.
ಬುಧವಾರ ರಾತ್ರಿ ನಡೆದ ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಪಂದ್ಯದಲ್ಲಿ ಇಂಗ್ಲೆಂಡ್ 181 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ 48.1 ಓವರ್‌ಗಳಲ್ಲಿ 368 ರನ್‌ಗಳಿಗೆ ಆಲೌಟ್ ಆಯಿತು. ಮೂರನೇ ವಿಕೆಟ್‌ಗೆ ಜತೆಯಾದ ಡೇವಿಡ್ ಮಲಾನ್ (96 ರನ್, 95 ಎಸೆತ, 12 ಬೌಂಡರಿ, 1 ಸಿಕ್ಸರ್) ಹಾಗೂ ಬೆನ್ ಸ್ಟೋಕ್ಸ್ ಬರೋಬ್ಬರಿ 199 ರನ್ ಕಲೆಹಾಕಿದರು. ಸ್ಟೋಕ್ಸ್ 76 ಎಸೆತದಲ್ಲಿ 2017ರ ಬಳಿಕ ಏಕದಿನ ಶತಕ ಬಾರಿಸಿದರು. ಕಠಿಣ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡ 39 ಓವರ್‌ಗಳಲ್ಲಿ 187 ರನ್‌ಗಳಿಗೆ ಸರ್ವಪತನ ಕಂಡಿತು. ಕಿವೀಸ್ ಪರ ಗ್ಲೆನ್ ಫಿಲಿಪ್ಸ್ (72) ಮಾತ್ರ ಪ್ರತಿರೋಧ ತೋರಿದರು .
ಇಂಗ್ಲೆಂಡ್: 48.1 ಓವರ್‌ಗಳಲ್ಲಿ 368 (ಮಲಾನ್ 96, ರೂಟ್ 4, ಸ್ಟೋಕ್ಸ್ 182, ಬಟ್ಲರ್ 38, ಲಿವಿಂಗ್‌ಸ್ಟೋನ್ 11, ಟ್ರೆಂಟ್ ಬೌಲ್ಟ್ 51ಕ್ಕೆ5, ಲಿಸ್ಟರ್ 69ಕ್ಕೆ3).
ನ್ಯೂಜಿಲೆಂಡ್: 39 ಓವರ್‌ಗಳಲ್ಲಿ 187 (ಕಾನ್ ವೇ 9, ವಿಲ್ ಯಂಗ್ 12, ಡೆರಿಲ್ ಮಿಚೆಲ್ 17, ಫಿಲಿಪ್ಸ್ 72, ರಚಿನ್ 28, ಜೆಮಿಸನ್ 14, ಲಿವಿಂಗ್‌ಸ್ಟೋನ್ 16ಕ್ಕೆ3, ವೋಕ್ಸ್ 31ಕ್ಕೆ3).