Mohammed Siraj: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನ ಎರಡನೇ ದಿನದಾಟದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಕೇವಲ 46 ರನ್ಗಳ ಅಲ್ಪ ಮೊತ್ತಕ್ಕೆ ಸರ್ವಪತನ ಕಂಡಿತು.
ತವರಿನಲ್ಲಿ 92 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡಕ್ಕೆ ಇದು ಅತ್ಯಂತ ಕಡಿಮೆ ಸ್ಕೋರ್ ಎಂಬುದು ಗಮನಾರ್ಹ. ನ್ಯೂಜಿಲೆಂಡ್ ಬೌಲರ್‌ಗಳ ಪೈಕಿ ಮ್ಯಾಟ್ ಹೆನ್ರಿ 5 ವಿಕೆಟ್ ಪಡೆದರು. ರೋರ್ಕಿ 4 ವಿಕೆಟ್ ಪಡೆದರು.
ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ರಿಷಬ್ ಪಂತ್ (20) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆ.ಎಲ್. ರಾಹುಲ್, ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಯಾವುದೇ ರನ್ ಖಾತೆ ತೆರೆಯದೇ ಶೂನ್ಯಕ್ಕೆ ಔಟಾಗುವ ಮೂಲಕ ಭಾರಿ ನಿರಾಸೆ ಮೂಡಿಸಿದರು. ಭಾರತದ ಇನ್ನಿಂಗ್ಸ್ ಬಳಿಕ ಬ್ಯಾಟಿಂಗ್ ಆರಂಭಿಸಿದ ಕಿವೀಸ್, ಬೌಲಿಂಗ್ನಂತೆಯೇ ಬ್ಯಾಟಿಂಗ್ ಮಿಂಚಿದೆ. ಎರಡನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 3 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದೆ.
ಎರಡನೇ ದಿನದಾಟದಲ್ಲಿ ಸ್ವಾರಸ್ಯಕರ ಘಟನೆಯೊಂದು ನಡೆಯಿತು. ಮೊದಲ ಇನಿಂಗ್ಸ್‌ನಲ್ಲಿ ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಲ್ಯಾಥಮ್ ಮತ್ತು ಡೆವೊನ್ ಕಾನ್ವೆ ಉತ್ತಮ ಆರಂಭ ನೀಡಿದರು. ಲ್ಯಾಥಮ್ ನಿಧಾನವಾಗಿ ಆಡಿದರೆ, ಮತ್ತೊಬ್ಬ ಆರಂಭಿಕ ಆಟಗಾರ ಡೆವೋನ್ ಕಾನ್ ವೇ ಏಕದಿನ ಪಂದ್ಯದಲ್ಲಿ ಆಡುವಂತೆ ಇನ್ನಿಂಗ್ಸ್ ಮುಂದುವರೆಸಿದರು.
ಇದರ ನಡುವೆ ನ್ಯೂಜಿಲೆಂಡ್ ಇನಿಂಗ್ಸ್ನ 15ನೇ ಓವರ್ ಬೌಲ್ ಮಾಡಿದ ಮೊಹಮ್ಮದ್ ಸಿರಾಜ್, ಕಾನ್ ವೇ ಅವರನ್ನು ಸ್ಲೆಡ್ಜ್ ಮಾಡಿದರು. ಆ ಓವರ್ನ ಮೂರನೇ ಎಸೆತದಲ್ಲಿ ಕಾನ್ ವೇ ಬೌಂಡರಿ ಬಾರಿಸಿದರು. ನಂತರ, ನಾಲ್ಕನೇ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದರು. ಈ ವೇಳೆ ಸಿರಾಜ್ ಕಾನ್ ವೇಯತ್ತ ಗಂಭೀರವಾಗಿ ನೋಡಿ ಏನೋ ಹೇಳಿದರು.
ಆದರೆ, ಕಾನ್ ವೇ ಅವರು ಸಿರಾಜ್ ಮಾತಿಗೆ ಗಮನ ಕೊಡಲಿಲ್ಲ. ಇತ್ತ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತಮಾಷೆಯ ಕಾಮೆಂಟ್ ಮಾಡಿದರು. ಕಾನ್ ವೇ ಅವರೇ ಸಿರಾಜ್ ಅವರು ಈಗ ಡಿಎಸ್‌ಪಿ ಆಗಿದ್ದಾರೆ ಎಂಬುದನ್ನು ಮರೆಯಬೇಡಿ ಎಂದರು. ಅವರ ಸಹೋದ್ಯೋಗಿಗಳೇ ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆಯೇ? ಅಥವಾ ಇಲ್ಲವೇ? ಒಂದು ವೇಳೆ ಸೆಲ್ಯೂಟ್ ಹೊಡೆದಿದ್ದರೆ ನನಗೆ ಖಂಡಿತವಾಗಿಯೂ ಶಾಕ್ ಆಗುತ್ತದೆ ಎಂದು ಗವಾಸ್ಕರ್ ಹೇಳಿದರು.
ಅಂದಹಾಗೆ 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಮೊಹಮ್ಮದ್ ಸಿರಾಜ್ ಅವರಿಗೆ ತೆಲಂಗಾಣ ರಾಜ್ಯ ಸರ್ಕಾರವು ಗ್ರೂಪ್-1 ಹುದ್ದೆಯಡಿ ಡಿಎಸ್‌ಪಿ ಹುದ್ದೆಯನ್ನು ನೀಡಿದೆ. ಸಿರಾಜ್ ಅವರು ಕ್ರಿಕೆಟಿಗ ಮಾತ್ರವಲ್ಲ, ಈಗ ತೆಲಂಗಾಣದ ಡಿಎಸ್‌ಪಿ ಕೂಡ ಹೌದು. (ಏಜೆನ್ಸೀಸ್)