ಕ್ರೀಡೆ

ಟೀಮ್​ ಇಂಡಿಯಾದ ಮುಖ್ಯ ಕೋಚ್​ ಹುದ್ದೆಗೆ ಬಿಸಿಸಿಐನಿಂದ ಶೀಘ್ರದಲ್ಲೇ ಅರ್ಜಿ ಆಹ್ವಾನ; ದ್ರಾವಿಡ್​ ಮರು ಅರ್ಜಿಗೂ ಅವಕಾಶ...

ಮುಂಬೈ: ಟಿ20 ವಿಶ್ವಕಪ್​ ಬಳಿಕ ಭಾರತ ತಂಡದ ಕೋಚ್​ ಹುದ್ದೆ ಅಲಂಕರಿಸುವವರಿಗಾಗಿ ಬಿಸಿಸಿಐ ಶೀಘ್ರದಲ್ಲೇ ಹುಡುಕಾಟ ಆರಂಭಿಸಲಿದೆ. ಮುಂದಿನ 3 ವರ್ಷಗಳ ಅವಧಿಗೆ ಕೋಚ್​ ಆಯ್ಕೆಗೆ ಬಿಸಿಸಿಐ ಮುಂದಾಗಿದ್ದು, ಈ ಸಂಬಂಧ ಅರ್ಜಿ ಆಹ್ವಾನಿಸಲು ಟಿ20 ವಿಶ್ವಕಪ್​ಗೆ ಮುನ್ನವೇ ಜಾಹೀರಾತು ಪ್ರಕಟಿಸಲಿದೆ. ಹಾಲಿ ಕೋಚ್​ ರಾಹುಲ್​ ದ್ರಾವಿಡ್​ ಹುದ್ದೆಯಲ್ಲಿ ಮುಂದುವರಿಯಲು ಬಯಸಿದರೆ ಮರುಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಸ್ಪಷ್ಟಪಡಿಸಿದ್ದಾರೆ.

"ಅರ್ಜಿ ಆಹ್ವಾನದ ಬಗ್ಗೆ ಮುಂದಿನ ಕೆಲವೇ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ನಾವು ಈ ಬಾರಿ ಸುದೀರ್ ಅವಧಿಗಾಗಿ ಕೋಚ್​ ಹುಡುಕಾಟದಲ್ಲಿದ್ದೇವೆ. ಮತ್ತೆ 3 ವರ್ಷ ಮುಂದುವರಿಯುವುದಾದರೆ ದ್ರಾವಿಡ್​ ಮರುಅರ್ಜಿ ಸಲ್ಲಿಸಬಹುದು' ಎಂದು ಜಯ್​ ಷಾ ಶುಕ್ರವಾರ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರತಿ ಕ್ರಿಕೆಟ್​ ಪ್ರಕಾರಕ್ಕೂ ಭಿನ್ನ ಕೋಚ್​ ಆಯ್ಕೆಯ ಪ್ರಸ್ತಾಪ ಸದ್ಯ ನಮ್ಮ ಮುಂದಿಲ್ಲ. ಭಾರತ ತಂಡದಲ್ಲಿ ಸದ್ಯ ಎಲ್ಲ ಮಾದರಿಯ ಕ್ರಿಕೆಟ್​ ಆಡುವ ಕೆಲ ಆಟಗಾರರಿದ್ದಾರೆ. ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ರಿಷಭ್​ ಪಂತ್​ ಅವರಲ್ಲಿ ಪ್ರಮುಖರು. ಆದರೆ ಅಂತಿಮವಾಗಿ ಈ ನಿರ್ಧಾರವನ್ನು, ಕೋಚ್​ ಆಯ್ಕೆ ಪ್ರಕ್ರಿಯೆ ನಡೆಸಿಕೊಡಲಿರುವ ಕ್ರಿಕೆಟ್​ ಸಲಹಾ ಸಮಿತಿಗೆ (ಸಿಎಸಿ) ಬಿಡುತ್ತೇವೆ. ಅವರು ಹೇಳಿದಂತೆ ನಾವು ಮಾಡುತ್ತೇವೆ ಜಯ್​ ಷಾ ತಿಳಿಸಿದ್ದಾರೆ. ಸಿಎಸಿಯ ಶಿಫಾರಸುಗಳನ್ನು ಆಧರಿಸಿ ವಿದೇಶಿ ಕೋಚ್​ ನೇಮಿಸುವ ಬಗ್ಗೆಯೂ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ಜಯ್​ ಷಾ ಸ್ಪಷ್ಟಪಡಿಸಿದ್ದಾರೆ.

ಸದ್ಯ ಇಂಗ್ಲೆಂಡ್​ ಮತ್ತು ಪಾಕಿಸ್ತಾನ ಕ್ರಿಕೆಟ್​ ಮಂಡಳಿಗಳು ಟೆಸ್ಟ್​ ಮತ್ತು ಏಕದಿನ&ಟಿ20 ಕ್ರಿಕೆಟ್​ ತಂಡಗಳಿಗೆ ಪ್ರತ್ಯೇಕವಾದ ಕೋಚ್​ ನೇಮಕ ಪ್ರಕ್ರಿಯೆಯನ್ನು ಅನುಸರಿಸುತ್ತಿವೆ.

ಮಾಜಿ ಕ್ರಿಕೆಟಿಗರಾದ ಜತಿನ್​ ಪರಾಂಜಪೆ, ಅಶೋಕ್​ ಮಲ್ಹೋತ್ರಾ ಮತ್ತು ಸುಲಕ್ಷಣಾ ನಾಯ್ಕ್​ ಸಿಎಸಿಯ ಮೂವರು ಸದಸ್ಯರಾಗಿದ್ದಾರೆ. ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಖಾಲಿ ಉಳಿದಿರುವ ಓರ್ವ ಆಯ್ಕೆಗಾರನ ಹುದ್ದೆಯನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದೂ ಜಯ್​ ಷಾ ತಿಳಿಸಿದ್ದಾರೆ.

2027ರವರೆಗೆ ಹೊಸ ಕೋಚ್​ ಅವಧಿ

ಮುಂದಿನ ಕೋಚ್​ ಅವಧಿ 3 ವರ್ಷ ಅಂದರೆ 2027ರ ಅಕ್ಟೋಬರ್​&ನವೆಂಬರ್​ವರೆಗೆ ಇರಲಿದೆ. ಈ ಅವಧಿಯಲ್ಲಿ 2025ರ ಚಾಂಪಿಯನ್ಸ್​ ಟ್ರೋಫಿ, 2026ರ ಟಿ20 ವಿಶ್ವಕಪ್​, 2027ರ ಏಕದಿನ ವಿಶ್ವಕಪ್​ ಪ್ರಮುಖ ಐಸಿಸಿ ಟೂರ್ನಿಗಳಾಗಿರಲಿವೆ. ಜತೆಗೆ ಏಷ್ಯಾಕಪ್​, ಪ್ರತಿಷ್ಠಿತ ಬಾರ್ಡರ್​&ಗಾವಸ್ಕರ್​ ಟ್ರೋಫಿ, ಇಂಗ್ಲೆಂಡ್​, ದಣ ಆಫ್ರಿಕಾ ಪ್ರವಾಸದಂಥ ಪ್ರಮುಖ ಸವಾಲುಗಳು ಇರಲಿವೆ.

ದ್ರಾವಿಡ್​ ಹಾಲಿ ಅವಧಿ ಜೂನ್​ನಲ್ಲಿ ಮುಕ್ತಾಯ

ಭಾರತ ತಂಡದ ಮುಖ್ಯ ಕೋಚ್​ ಆಗಿ 2021ರ ನವೆಂಬರ್​ನಲ್ಲಿ ನೇಮಕಗೊಂಡಿದ್ದ ರಾಹುಲ್​ ದ್ರಾವಿಡ್​ಗೆ ಮೊದಲಿಗೆ 2023ರ ಅಕ್ಟೋಬರ್​&ನವೆಂಬರ್​ನಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್​ವರೆಗೆ 2 ವರ್ಷಗಳ ಅವಧಿ ನೀಡಲಾಗಿತ್ತು. ವಿಶ್ವಕಪ್​ ಫೈನಲ್​ನಲ್ಲಿ ಸೋಲು ಕಂಡ ನಡುವೆಯೂ ಟಿ20 ವಿಶ್ವಕಪ್​ವರೆಗೂ ಮುಂದುವರಿಯಲು ದ್ರಾವಿಡ್​ ಮನವೊಲಿಸಲಾಗಿತ್ತು. ಇದೀಗ ಜೂನ್​ನಲ್ಲಿ ದ್ರಾವಿಡ್​ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಈ ಬಾರಿ ಅವರನ್ನು ನೇರವಾಗಿ ಮತ್ತೆ ಮುಂದುವರಿಸುವ ಬದಲಾಗಿ ಹೊಸದಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ.